ಅನುದಿನ ಕವನ-೮೦೬, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಬಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಖಸೀದಾ

ಖಸೀದಾ ಕಾವ್ಯ ಪ್ರಕಾರ                                      (ದೀರ್ಘ ಗಜಲ್ ,ಗಜಲ್ ಗಳ ಕೂಟ)

ಭಾವಗಳ ಅಕ್ಷರಕ್ಕೆ                                      ಪದವಾದನು ಅವನು                                  ಭಾವನೆಯ ಒಲುಮೆಗೆ                                ಬೆಳಕಾದನು ಅವನು

ಬಂಧನದ ಬದುಕಿಗೆ
ಬಿಡುಗಡೆಯ ಮಂತ್ರವೇಕೆ
ಸುಖದ ಸಾಗರಕೆ
ಅಲೆಯಾದನು ಅವನು

ನನ್ನೆದೆಯ ತೋಟದ
ಭ್ರಮರವಾಗಿ ಅರಸುತ
ವನಕುಸುಮ ಮಧುವ
ಹೀರುವನು ಅವನು

ಬೆಟ್ಟದ ಪುರದಲ್ಲಿ
ಈಶ್ವರನೇ ತಾನಾಗಿ
ದೇವಿಯ ಕೃಪೆಪಡೆದ
ಕಾಳಿದಾಸನು ಅವನು

ಮನೆಯೊಡೆಯ ಮನಕು
ಒಡೆಯನಾಗುತ ಒಲಿದು
ಓಕುಳಿಯ ಬಣ್ಣದಲಿ
ಮಿಂದವನು ಅವನು

ಮುಸುನಗೆಯ ಮೊಗದಲ್ಲಿ
ಮಂದಹಾಸವ ಮೂಡಿಸುತ
ಮಾತಿನ ಮೋಡಿಯಲಿ
ಕದ್ದವನು ಅವನು

ಗರಿಗೆದರುವ ಆಸೆಗಳ
ಮನದಲ್ಲಿ ತುಂಬುತ್ತ
ಸಾಧನೆಯ ಶಿಖರಕೆ
ಪ್ರೇರಕನು ಅವನು

ಅನನ್ಯ ಅನುಭೂತಿ
ಅಭಿಸಾರಕ ಭವತಾರಕ
ರೇಗಿಸುತ ಹಾಸ್ಯದಲಿ
ತೇಲಿಸುವನು ಅವನು

ಕಲ್ಲಲು ಹೊನ್ನನ್ನು
ಹೊರದೆಗೆಯುವ ಶೋಧಕನು
ರತುನದಾ ಹೊಳಪನ್ನು
ಹೆಚ್ಚಿಸುವನು ಅವನು
||೯||

ಬಂದಿರುವ ಭಾಗ್ಯವ
ಬಿಡದವನು ಅವನು
ಬೆಂಬಿಡದೆ ನೆರಳಂತೆ
ಬರುವವನು ಅವನು

ಕತ್ತಲೆಯ ಕೂಪದಲಿ
ಚೆಂಬೆಳಕಾಗಿ ಬಂದನಲ್ಲ
ಮೆತ್ತನೆಯ ಮುತ್ತಲ್ಲಿ
ಮತ್ತೇರಿಸುವನು ಅವನು

ಉಸಿರಿರುವ ತನುವಿನೊಳು
ಚೈತನ್ಯ ಚಿಲುಮೆಯು
ನನ್ನೆದೆಯ ಮಾಲಿಕೆಯ
ಮಾಲೀಕನು ಅವನು

ಬಿರುನುಡಿಯ ಆಡದಿಹ
ಮೃದುಮನಸಿನ ಕೋಮಲನು
ಚಂದಿರನ ಕಾಂತಿಯ
ಚಕೋರನು ಅವನು

ಕಾಯಕವೆ ಕೈಲಾಸ
ಅರಿತಿರುವ ಯೋಗಿಯು
ಬಸವಾದಿ ಶರಣರ
ಅನುಚರಿತನು ಅವನು

ಒಮ್ಮನದಿ ಒಮ್ಮತವ
ನೀಡುತಿಹ ನಿಷ್ಠನು
ಅನುಪಮ ಅತೀತ
ಅನುಕರಣನು ಅವನು

ಕೈಹಿಡಿದು ಜೊತೆಗೂಡಿ
ಸಪ್ತಪದಿ ತುಳಿದಿಹನು
ಬದಲಾಗುವ ಜಗದೊಳಗೆ
ಬದಲಾಗನು ಅವನು

ಮೋಡಗಳ ನೋಡುತ್ತ
ನರ್ತಿಸುವ ಮಯೂರ
ಗರಿಗೆದರಿ ಮನಸೆಳೆವ
ನಟರಾಜನು ಅವನು

ನೊರೆಹಾಲಿನ ಬಿಳುಪಲ್ಲಿ
ನಗುತಿರುವೆ ಮೋಹನನು
ಕುಡಿನೋಟದಿ ರತುನಳಾ
ಕರೆದಿಹನು ಅವನು
||೧೮||

ಹುಸಿನುಡಿಯ ಆಡದಿಹ
ಸತ್ಯವಂತನು ಅವನು
ಹೊತ್ತು ಮೂರರೆಘಳಿಗೆ
ಮೆರೆದವನು ಅವನು

ಬಾಳಿನ ಬತ್ತಳಿಕೆಯಲಿ
ಸಿಟ್ಟು ಸೆಡುವುಗಳೇಕೆ
ಶಾಂತಿಪ್ರೀತಿಯ ತೋರಿ
ಕರಗಿಸುವನು ಅವನು

ಜನಕಷ್ಟಗಳ ಪರಿಹರಿಸುವ
ದೇವ ಮಾನವನಿವನು
ಸಾವಿರ ಜನಗಣದಲಿ
ಗುಣವಂತನು ಅವನು

ಕತ್ತಲೆಯ ಬಟ್ಟೆಯಲಿ
ಪಂಜನಿಡಿಯುತ ಬಂದು
ಬೆಳಕಿನ ಭರವಸೆಯ
ತುಂಬುವನು ಅವನು

ಒಂಟಿ ಪಯಣದಲಿ
ಜಂಟಿಯಾಗುತ ಸಾಗಿ
ಸಂಸಾರ ನೌಕೆಯಲಿ
ಅಂಬಿಗನು ಅವನು

ಬೆಂಗಾವಲು ಅಡಿಗಡಿಗೂ
ಗಂಡೆದೆಯ ಗಟ್ಟಿಗನು
ಸುರಿಸುವನು ಮಳೆಯಂತೆ
ಪ್ರೀತಿಯನು ಅವನು

ಆನಂದದ ಐಸಿರಿಯು
ಅನುರಾಗದ ಒಡಲು
ಉಸಿರಿರುತನ ಹೆಸರೇಳುವೆ
ನನ್ನೊಡೆಯನು ಅವನು

ಕಣ್ರೆಪ್ಪೆಯು ಕಾವಲಿಗೆ
ಕರುಣಾಮಯಿ ಕರ್ಣನು
ನನಗಾಗಿ ಪ್ರಾಣವನೆ
ನೀಡುವನು ಅವನು

ಚಂದಿರನ ಅಂಗಳದಿ
ಹೊಂಬಣ್ಣದ ರೂಪದಲಿ
ರತುನಳ ಇರುವಿಕೆಯ
ಕಂಡವನು ಅವನು
||೨೭||

 

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ
ಹುನಗುಂದ.                                                   *****