ಅನುದಿನ ಕವನ-೮೧೦, ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕವಿತೆ

ಅನುದಿನ ಕವನ ಕಾಲಂನ್ನು ಪ್ರತಿ ದಿನವೂ ಸಮೃದ್ಧಗೊಳಿಸುತ್ತಿರುವ ಎಲ್ಲಾ ಸನ್ಮಾನ್ಯ ಹಿರಿಯ-ಕಿರಿಯ ಕವಿ-ಕವಿಯಿತ್ರಿಯರಿಗೆ ಒಲುಮೆಯ ವಿಶ್ವ ಕಾವ್ಯದಿನದ ಹಾರ್ದಿಕ ಶುಭಕಾಮನೆಗಳು.                                 ಇದು ಕವಿತೆಯ ಮೇಲಿನ ಕವಿತೆ. ಕವಿತೆಯ ಆಂತರ್ಯ ಬಿಂಬಿಸುವ ಭಾವಪ್ರಣತೆ. ಒಪ್ಪಿಸಿಕೊಳ್ಳಿ  ಅಂತಾರೆ  ಕವಿ ಎ.ಎನ್. ರಮೇಶ್ ಗುಬ್ಬಿ ಅವರು.                            ವಿಶ್ವ ಕಾವ್ಯ ದಿನಕೆ ಕವಿಗಳ ನಲುಮೆಯುಡುಗೊರೆ. ಕವಿ ಮತ್ತು ಕಾವ್ಯಪ್ರಿಯರ ಹೃದಯಗಳು ಚಿರಂತನ ಬೆಸೆಯುತಿರಲಿ ಕವಿತೆಯೆಂಬ ಅನನ್ಯ ಅಕ್ಷರಬಂಧಗಳ ಈ ಭಾವಸಂವೇದನೆಗಳ ‘ದಿವ್ಯತೊರೆ’ಯಲ್ಲಿ !!                                 (ಸಂಪಾದಕರು)

ಕವಿತೆ..!

ಭಾವದ ಭಾರಕ್ಕೆ
ಭಾಷೆ ಕುಸಿಯದಂತೆ
ಕೊನರಬೇಕು ಕವಿತೆ.!

ಭಾಷೆಯ ವೈಭವಕ್ಕೆ
ಭಾವ ಬಾಡದಂತೆ
ಅರಳಬೇಕು ಕವಿತೆ.!

ಭಾಷೆ-ಭಾವ ಜುಗಲ್ಬಂದಿ
ಮೇಳದಿ ಮಧುರವಾಗಿ
ಮೂಡಬೇಕು ಕವಿತೆ.!

ಲಯ ಲಾವಣ್ಯಗಳಲಿ
ನಯವಾಗಿ ಬಳುಕಿ
ಬೀಗಬೇಕು ಕವಿತೆ.!

ಲಾಸ್ಯ ಲಾಲಿತ್ಯಗಳಲಿ
ಬೆಳಕ ಪ್ರಹರಿಯಾಗಿ
ಮಿನುಗಬೇಕು ಕವಿತೆ.!

ರಾಗ ರಂಜನೆಗಳಲಿ
ನಾದ ಲಹರಿಯಾಗಿ
ಹರಿಯಬೇಕು ಕವಿತೆ.!

ನಲ್ಮೆ ಒಲುಮೆಗಳಲಿ
ಚೈತನ್ಯ ಚಿಲುಮೆಯಾಗಿ
ಉಲಿಯಬೇಕು ಕವಿತೆ.!

-ಎ.ಎನ್.ರಮೇಶ್. ಗುಬ್ಬಿ.