ಹಳತಾದ ಯುಗಾದಿಯ ದಿನಕೊಂದು ಹೊಸಹಾಡು
೧
ಇಲ್ಲದ ಹೊಸತನು
ತರಬೇಕು ಎಲ್ಲಿಂದ
ಹಳೆಯ ಪದಗಳ ನಡುವೆ
ಹಾಡದು ಹುಟ್ಟೀತು ಎಲ್ಲಿಂದ
ಬೆಲ್ಲಕಿಂತ ಬೇವೇ ಅಧಿಕ
ಈಗ ಎಲ್ಲಿಯ ಯುಗದ ಆದಿ
ಬೆಲ್ಲವನಷ್ಟೇ ಅಲ್ಲ
ಬೇವನೂ ಕೂಡ ಕೊಂಡು ತರಬೇಕಿದೆ
ಹೊಸತಿಗೆಲ್ಲಿಯ ಹಾದಿ
೨
ತಲೆಗೆ ಹಚ್ಚಿದ ಎಣ್ಣೆಯ ಜಿಡ್ಡು
ಪೂರ್ತಿ ತೊಳೆಯಲಿಲ್ಲ
ನೀರು ಅರ್ಧ ಬಂದು
ಮೇಲೆ ಟ್ಯಾಂಕಿನ ನಲ್ಲಿ
ಎಲ್ಲೊ ಒಡೆದಿದೆಯಂತೆ
ಮಾಲಿಕನದು ಒಂದೆ ಸಮ ವರಾತು
೩ .
ಕೈಚೀಲ ಹಿಡಿದು ಪೇಟೆಗೆ
ಹೊರಟ ಕವಿ
ಪೇಟೆಯಲ್ಲಿ ನಡೆದಿತ್ತು
ಯುಗಾದಿ ಕವಿಗೋಷ್ಠಿ
ಕವಿತೆ ಓದುತ್ತಿದ್ದ ಕವಿಯತ್ರಿ
ನೋಡುತ್ತ ಹೊತ್ತು ಹೋಯ್ತು
ಪೂಜೆಗೆ ಕುಳಿತ ಯಜಮಾನಿ
ಸಿಟ್ಟು ನೆತ್ತಿಗೇರಿ
ದೇವರಿಗೆ ಬದಲು
ತಡವಾಗಿ ಬಂದ ಗಂಡನಿಗೆ
ಪೂಜೆ ಕಾದಿತ್ತು
೪
ಮಾವು ತಳಿರನು ತುಂಬಿ
ತರಬೇಕಿದ್ದ ಲಾರಿ ಸ್ಟ್ರೈಕಿನ
ಕಾರಣ ತಡವಾಗಿದೆ ಬರುವದು
ಹರಿದು ಹಾಕಲಾದ
ಹಳೆಯ ತೋರಣಗಳಿಗೆ
ಹೊಸತು ಎಲೆಯನೆಲ್ಲಿಂದ
ಜೋಡಿಸುವದು
೫
ಟೀ ವಿ ಪರದೆಯ ಮೇಲೆ
ಚಿತ್ರ ನಟರದು ಅ್ಯಾಂಕರ್ ಗಳ
ಯುಗಾದಿ ಸಂಬ್ರಮ
ನೂರನೆಯ ಸಲ
ಹಳೆಯ ಹಾಡಿಗೆ ಕುಣಿವ ವಿಕ್ರಮ
೬
ಯುಗಾದಿ ಕಳೆದರೂ
ಮರಳಿ ಬರುವ ಬೇಂದ್ರೆ
ಅಜ್ಜನ ಹಾಡು ಹಳತಾಗಿದೆ.
ಎಲ್ಲರನು ಹೊಸತು ಮಾಡುವ
ಯುಗಾದಿ ನಮ್ಮನಷ್ಟೇ
ಮರೆತಿರುವದು ನಿಜವಾಗಿದೆ
೭
ಎಂದಿನಂತೆ ಎದ್ದ ಸೂರ್ಯ
ಯುಗಾದಿಯ ದಿನದಂದೂ
ನಿಗದಿತ ದಿನಕ್ಜೆ ಮುಳಗಿದ
ಹೊಸ ಹಬ್ಬದ ಶುಭಾಶಯ ಕೋರಿ
ಬಂದ ಹಳೆಯ ಗೆಳತಿಯ ಮೆಸೆಜುಗಳನಷ್ಟೇ
ನಾಜೂಕಾಗಿ.ಡಿಲಿಟು ಮಾಡಿದ
ಕವಿ ದಿನ ಮುಗಿಸಿದ
೮
ಎಲ್ಲದಿನಗಳಂತೆ ಯಾವ ಹೊಸತನು
ತರದೆ ದಿನವು ಎಂದಿನಂತೆ ಮುಗಿದೆ ಹೋಯ್ತು
ತಳಿರು ತೋರಣವಿಲ್ಲದ ದಿನ
ತಣ್ಣಗಾದ ಸಿಹಿ ಅಡುಗೆ ಮನೆಯಲ್ಲಿ
ಯುಗಾದಿಯನಾಚರಿಸಿಕೊಂಡಿತು
-ಡಾ ವೈ ಎಂ .ಯಾಕೊಳ್ಳಿ, ಸವದತ್ತಿ