ಬಳ್ಳಾರಿ, ಮಾ.22:ಪ್ರಸ್ತುತ ಸ್ವಾರ್ಥ,
ಅಧಿಕಾರ ಲಲಾಸೆ, ಮತ್ತಿತರ ಕ್ಷುಲ್ಲಕ ಕಾರಣಗಳಿಗಾಗಿ ಸಾಮರಸ್ಯ ಕದಡುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದರೆ ನಗರದಲ್ಲಿ ಹಿರಿಯ ಸಾಹಿತಿಯೊಬ್ಬರ ಕುಟುಂಬ ಸೌಹಾರ್ಧ ಯುಗಾದಿ ಆಚರಿಸಿ ಗಮನ ಸೆಳೆದಿದೆ.
ನಗರದ ಹಿರಿಯ ಸಾಹಿತಿ ಎಪ್ಪರೆಡರ ಹರೆಯದ ಡಾ. ವೆಂಕಟಯ್ಯ ಅಪ್ಪಗೆರೆ ಅವರ ಕುಟುಂಬ ಪ್ರತಿ ವರ್ಷದಂತೆ ಈ ಬಾರಿಯೂ ಅನ್ಯ ಧರ್ಮೀಯರ ಮನೆಯಲ್ಲಿ ಸೌಹಾರ್ಧ ಯುಗಾದಿ ಆಚರಿಸಿ ಕೋಮು ಸಾಮರಸ್ಯವನ್ನು ಮುಂದುವರೆಸಿದ್ದಾರೆ.
ಹಿಂದೂ ಚಾಂದ್ರಮಾನ ಸಂಪ್ರದಾಯದ ಪ್ರಕಾರ ಉಗಾದಿ ಹಬ್ಬದಲ್ಲಿ ಹುಟ್ಟಿರುವ ಡಾ.ವೆಂಕಟಯ್ಯ ಅಪ್ಪಗೆರೆ ಅವರು ಪ್ರತಿವರ್ಷವೂ ಜಾತ್ಯಾತೀತ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ತಮ್ಮ ಮನೆಯಲ್ಲಿ ಒಬ್ಬಟ್ಟು(ಹೋಳಿಗೆ), ಕಾಯಿಹಾಲು, ಚಿತ್ರಾನ್ನ, ಹಪ್ಪಳ-ಸಂಡಿಗೆ ಇತ್ಯಾದಿ ಪುಷ್ಕಳ ಭೋಜನ ತಯಾರಿಸಿ ಕೊಂಡು ಮುಸ್ಲೀಂ, ಕ್ರೈಸ್ತ ಇತ್ಯಾದಿ ಧರ್ಮಗಳ ಕುಟುಂಬದ ಒಂದು ಮನೆಗೆ ಹೋಗಿ ಆ ಮನೆಯ ಸರ್ವ ಸದಸ್ಯರ ಜೊತೆಯಲ್ಲಿ ಊಟ ಮಾಡಿ, ಆಪ್ತ ಮಾತುಕತೆಯೊಂದಿಗೆ ಸಂಭ್ರಮಿಸಿ ವಿಶಿಷ್ಟ ಉಗಾದಿ ಹಬ್ಬ ಆಚರಿಸಿದರು.
ಇಲ್ಲಿನ ವಿದ್ಯಾನಗರದಲ್ಲಿ ವಾಸವಿರುವ ಡಾ. ಅಪ್ಪಗೆರೆ ಕುಟುಂಬ, ಬುಧವಾರ ಕುವೆಂಪು ನಗರದಲ್ಲಿರುವ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಹೊನ್ನೂರಲಿ ಅವರ ಮನೆಯ ಕುಟುಂಬದ ಸದಸ್ಯರೊಂದಿಗೆ ಹಬ್ಬದೂಟ ಸವಿಯುವ ಮೂಲಕ ಡಾ. ಅಪ್ಪಗೆರೆ ಕುಟುಂಬ ಭಾವೈಕ್ಯತೆಯನ್ನು ಎತ್ತಿಹಿಡಿದರು.
ಕರ್ನಾಟಕ(ಪ್ರಗತಿ) ಗ್ರಾಮೀಣ ಬ್ಯಾಂಕಿನ ಉನ್ನತ ಅಧಿಕಾರಿಯಾಗಿದ್ದ ಡಾ. ಅಪ್ಪಗೆರೆ 2006ರಲ್ಲಿ ಕೋಲಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರಂಭಿಸಿದ ಈ ಸೌಹಾರ್ದ ಯುಗಾದಿ ಚಿಕ್ಕಬಳ್ಳಾಪುರ , ಚಿತ್ರದುರ್ಗ ಇದೀಗ ನಿವೃತ್ತರಾದ ಬಳಿಕವೂ ಬಳ್ಳಾರಿಯಲ್ಲೂ ಮುಂದು ವರೆದಿದೆ. ಕೊರೋನಾದ ಹಿನ್ನಲೆಯಲ್ಲಿ ಎರಡು ವರ್ಷ ಸ್ಥಗಿತಗೊಂಡಿದ್ದ ಸಂಭ್ರಮ ಹಿಂದಿನ ವರ್ಷ ಕ್ರೈಸ್ತ ಕುಟುಂಬದ ಪ್ರಭುದಾಸ್ ಅವರ ಮನೆಯಲ್ಲಿ ಆಚರಿಸಲಾಗಿತ್ತು.
ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕರಾಗಿರುವ ಎನ್. ಸರಸ್ವತಿ ಅಪ್ಪಗೆರೆ ಅವರು ತಮ್ಮ ಪತಿ ಡಾ. ವೆಂಕಟಯ್ಯ ಅವರ ಈ ಮಾದರಿ ಕಾರ್ಯಕ್ಕೆ ಹಲವು ವರ್ಷಗಳಿಂದ ಕೈ ಜೋಡಿಸುತ್ತಾ ಬಂದಿದ್ದಾರೆ.
ಮೂರು ವರ್ಷಗಳಿಂದ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರ ಕುಟುಂಬವೂ ಇವರಿಗೆ ಸಾಥ್ ನೀಡುತ್ತಾ ಬಂದಿದೆ. ಡಾ. ಹೊನ್ನೂರಲಿ ಅವರಿಗೆ ಡಾ. ಅಪ್ಪಗೆರೆ ಮತ್ತು ಸಿ.ಮಂಜುನಾಥ್ ದಂಪತಿ ಪುಸ್ತಕಗಳನ್ನು ನೀಡಿ ಅಭಿನಂದಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾ. ಅಪ್ಪಗೆರೆ ದಂಪತಿಯನ್ನು ಡಾ. ಹೊನ್ನೂರಲಿ ದಂಪತಿ ಸನ್ಮಾನಿಸಿ ಗೌರವಿಸಿದರು.
ಕೋಮು ಸಾಮರಸ್ಯ ಸಂದೇಶ ಸಾರುವ ಸೌಹಾರ್ಧ ಯುಗಾದಿ ಸಂಭ್ರಮಕ್ಕೆ ಗಂಗಾವತಿಯ ಉಪನ್ಯಾಸಕ ಮಂಜುನಾಥ್ ಹೊಸಮನಿ ಅವರು ಸಾಕ್ಷಿಯಾದರು.
ಮಾದರಿ ಬಾವೈಕ್ಯತೆ, ಸೌಹಾರ್ದ ಯುಗಾದಿಯ ಈ ಪರಂಪರೆ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ರಾಜ್ಯದ ಮನೆ ಮನೆಗೂ ಹಬ್ಬಲಿ ಎಂದು ಡಾ. ಹೊನ್ನೂರಲಿ ಅವರು ಹಾರೈಸಿದರು.
*****