ವಿಜಯನಗರ(ಹೊಸಪೇಟೆ), ಮಾ. 23: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಸ.ಚಿ.ರಮೇಶ ಅವರ ಅಧಿಕಾರಾವಧಿ ಫೆ. 21ರಂದು ಕೊನೆಗೊಂಡಿದೆ. ವಿಶ್ವವಿದ್ಯಾಲಯದ ಅಧಿನಿಯಮ ಮತ್ತು ಪರಿನಿಯಮದ ಪ್ರಕಾರ ಈಗಾಗಲೇ ಕುಲಪತಿಗಳ ನೇಮಕಾತಿ ಸಂಬಂಧಿಸಿದಂತೆ ಡಾ. ಎಸ್.ಕೆ. ಸೈದಾಪುರ ಅವರ ಅಧ್ಯಕ್ಷತೆಯಲ್ಲಿ ಡಾ. ಸಿದ್ದು ಅಲಗೂರು ಮತ್ತು ಡಾ. ಎನ್.ಸಿ. ಗೌತಮ್ ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ಮಾ. 20ರಂದು ರಚಿಸಲಾಗಿದೆ.
ಕನ್ನಡ ವಿಶ್ವವಿದ್ಯಾಲಯದಲ್ಲಿ ಈವರೆಗೆ ಇಬ್ಬರು ಒಕ್ಕಲಿಗ (ಗೌಡ) ಸಮುದಾಯದವರು, ಇಬ್ಬರು ಲಿಂಗಾಯತ ಸಮುದಾಯದವರು, ಇಬ್ಬರು ಕುರುಬ ಸಮುದಾಯದವರು ಮತ್ತು ಇಬ್ಬರು ಓಬಿಸಿ ಸಮುದಾಯಕ್ಕೆ ಸೇರಿದವರನ್ನು ಕುಲಪತಿಗಳಾಗಿ ನೇಮಿಸಲಾಗಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೇರಿದವರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಾತಿ ಮಾಡಿರುವುದಿಲ್ಲ. ಈ ಬಾರಿ ಪರಿಶಿಷ್ಟರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಾತಿ ಮಾಡಬೇಕಿದೆ. ಪರಿಶಿಷ್ಟರನ್ನು ನೇಮಕ ಮಾಡಿದರೆ ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ನೀಡಿದಂತಾಗುತ್ತದೆ. ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
*****