ಹಾರಿರುವ ಹಕ್ಕಿಯನರಸಿ….!
ನೀನು ಕಟ್ಟಿ ಆಡಿದಮನೆ
ಮೆಟ್ಟಿ ಕೂಡಿಟ್ಟ ಆಟಿಕೆಯ ಸಾಮಾನು
ಮತ್ತೆ ಮತ್ತೆ ಕೇಳುತ್ತವೆ ನನ್ನ
ಹೋದವೆಲ್ಲಿ ಆ ಸಂತಸದ ದಿನ?
ಅಪ್ಪನ ತೊಳು ಏರಿ ಕುಕ್ಕೂ ಮರಿ ಆಡಿದ್ದು
ಮೊನ್ನೆ ಮೊನ್ನಯಷ್ಟೇ ಮರೆತಿಲ್ಲ
ತುಂಬಿದ ಜನರ ನಡುವೆ ಕಾಣದ
ಊರ ತೇರನ್ನು ಹೆಗಲಮೇಲೆರಿಸಿ
ಊರ ಮಂದಿಗೆ ನಾಚದೇ
ನಾನು ಹೊತ್ತುಮೆರೆದ ಹೆಗಲು ಮತ್ತೆ ಮತ್ತೆ ಮುಟ್ಟಿಕೊಳಬೇಕೆನಿಸುತ್ತದೆ.
ಅಬ್ಬಾ ಕಾಲವದೆಷ್ಟು ನಿರ್ದಯಿ?
ನಿನ್ನೆಯಷ್ಟೇ ಸೈಕಲ್ ಮೇಲಿಂದ ಬಿದ್ದು
ತರಚಿದ ಗಾಯಕ್ಕೆ ಮುಲಾಮು ಸವರಿದ್ದು,
ಯಾರದೋ ಗಾಡಿಯಿಳಿದು ಬಿದ್ದ ನಿನ್ನ
ಹೊತ್ತು ತಂದು ಆರೈಕೆ ಮಾಡಿದ್ದು
ಸಾವರಿಸು ಮಗನೇ
ಅವಸರ ಬೇಡ ಎಂದು ಗದರಿದ್ದು
ಇಂದು ನೀನೇ ನಡೆಯಲು
ಜೋಲಿ ಯಾಗುವ ನನ್ನ ಆಸರೆ ಹಿಡಿದು
ಮೆಲ್ಲಗೇ ಅಪ್ಪಾ
ಎಂದಾಗ
ನನ್ನ ಅಪ್ಪನೇ ಕಣ್ಣಮುಂದೆ
ಬಂದು ಕಣ್ಣ ಪಸೆ ಯೊಡೆದರೆ
ನಾನೇನು ಹೇಳಲಿ?
ಮಗುವೆ …
ನೀನೀಗ ತಂದೆಯಾಗುವ ಕಾಲ..
ನನಗೊಂದೇ ಆಸೆ..
ಕಾಲದೇಶಗಳಾಚೆಗೆ
ಹಕ್ಕಿಯಾಗಿ ಹಾರಿರುವ ನೀನು
ಮತ್ತೆ ಗೂಡಿಗೆ ಬಂದು
ಜೋತು ಬೀಳುತ್ತಿರುವ ತೋಳುಗಳಿಗೆ
ಮತ್ತದೇ
ಆಸರೆ ನೀಡಬೇಕು..
ನಾವು ಬೆಳೆದ ಕಾಳು
ನಮ್ಮ ಮನೆಯೊಳಗೇ ಅನ್ನವಾಗಬೇಕು
ತಾಯಿಮರಿಗಳೊಂದಿಗೆ ಆಡುವ ಹಾಗೆ
ಇಲ್ಲೊಂದು ಮರಿಮಕ್ಕಳ ಲೋಕ
ಮೂಡಿ ಹೂವಿನ ತೋಟ ಅರಳಬೇಕು..
ಇಷ್ಟೇ ಅಲ್ಲವೇ ನಮ್ಮ ಅಜ್ಜಮುತ್ತಜ್ಹರು
ಕನಸಿದ್ದು..ಅವರ ಕೊಂಡಿಯಾದ ನಾನು
ನೆನೆಸಿದ್ದು..
ಹಕ್ಕಿ ಮರಳಿ ಬರಲಿ ಗೂಡಿಗೆ
ಹಾಡು ಹೊರಡಲಿ ಕೊಂಬೆ ಕೊಂಬೆಗೆ
-ಡಾ.ವೈ ಎಂ ಯಾಕೊಳ್ಳಿ, ಸವದತ್ತಿ
*****