ಅನುದಿನ ಕವನ-೮೧೪, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಮಾನಿನಿ

ಮಾನಿನಿ

ಬಲ್ಲವರಾರು ಹೆಣ್ಣ ಮನ
ಕಲ್ಪನೆಗೂ ತಾ ನಿಲುಕದವಳು
ಸಾಧ್ವಿ ಶಿರೋಮಣಿ ಮಾಲಿನಿ
ಶಕ್ತಿ ಸ್ವರೂಪಿಣಿಯು ಅವಳು.

ಬಲ್ಲೆ ಎಂದವನು ಬಡಬಡಿಸುವ
ಅರಿಯದೇ ಅವಳ ಅಂತರಾಳ
ಜೀವಮಾನ ಅಲ್ಲೇ ಪರಿತಪಿಸುವ
ಅವಳು ಬೀಸಲು ಗಾಳ.

ಮಾತಲಿ ಮರಳು ಮಾಡಿ
ಮಾನಿನಿಯ ಹೃದಯ ಗೆಲ್ಲಲಾರೆ
ಪೊಳ್ಳು ಭರವಸೆ ನೀಡಿ
ಬದುಕಲಿ ನೆಮ್ಮದಿ ಕಾಣಲಾರೆ.

ಮಾತೆಂದೂ ಮೃದು ಮಧುರ
ಪ್ರೀತಿ ವಾತ್ಸಲ್ಯ ಕಟ್ಟಲು
ಮಾತಿಲ್ಲದೇ ಮಹಾ ಸಮರ
ಮಾತ್ಸರ್ಯ ಮನದಿ ತುಂಬಿರಲು.

ನಮ್ರತೆಯಲಿ ಮಾತೆ ತಾನಾಗಿ
ಮಮತೆಯ ಮೊಗ ತೋರುವಳು
ಸಹನೆ ಮೀರಲು ದುರ್ಗಿಯಾಗಿ
ಕ್ರೋಧದ ಕೆಂಗಣ್ಣ ತೆರೆದಾಳು.

ಅಕ್ಕರೆ ತೋರಲು ನೀ
ತೋಳ ತೆಕ್ಕೆಯಲಿ ಬೆರೆಯುವಳು
ರಕ್ಕಸತನ ತೋರಿದರೆ ನಿನ್ನೇ
ನುಂಗಿ ನೀರು ಕುಡಿಯುವಳು.

ಅಂದ ಚೆಂದ ಬಣ್ಣಿಸಿದಂತೆ
ಹೆಣ್ಣ ಮನ ಊಹಿಸಲಸಾಧ್ಯ
ನಡೆದರೆ ಅವಳ ನುಡಿಯಂತೆ
ನೆಮ್ಮದಿಯ ಬದುಕು ಸಾಧ್ಯ.

✍️ -ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ