ಜಗಳವೆಂದರೆ …
ನಾವಿಬ್ಬರು ಜಗಳವಾಡುವುದಕ್ಕೆ
ಸಾವಿರ ಕಾರಣಗಳಿರುತ್ತವೆ.
ಎಲ್ಲೆಂದರೆ ಅಲ್ಲಿ,
ಹೇಗಿದ್ದರೆ ಹಾಗೇ
ಬಹು ಬಾರಿ ಕಾರಣವೇ ಇರುವುದಿಲ್ಲ.
ಕೆಲವೊಮ್ಮೆ ಮುಖದ ಭಾವ
ಎಲ್ಲವನ್ನು ತೆರೆದಿಡುತ್ತದೆ
ಕಣ್ಣು ಕಥೆ ಹೇಳುತ್ತದೆ
ಎಂಥದೋ ಸುಟ್ಟ ವಾಸನೆ
ಅಡುಗೆ ಮನೆಯಲ್ಲಿ
ವ್ಯಾಜ್ಯದ ಇರುವಿಕೆಗೆ ಇಂಬು ನೀಡುತ್ತದೆ
ಹಲಬಾರಿ ಅವಳ ಧ್ವನಿಯ ಏರಿಳಿತ
ಬಿಸಿಯೇರುವ ಪರಿಸರವೂ
ಧಗೆಯ ಝಳವೂ
ಸಾವಿರ ಅರ್ಥ ಕೊಡುತ್ತದೆ
ನಾನೇನು ಕಡಿಮೆಯಿಲ್ಲ
ಕದನ ಕಲಿ
ತೋಳು ಮಡಿಚಿ ಸಿದ್ಧನಾಗಿಬಿಡುತ್ತೇನೆ.
ಕದನ ವಿರಾಮ ಘೋಷಿಸಿಕೊಂಡ ದಿನ
ಶುದ್ಧ ಬೋರು ಎನಿಸಿ
ಇರದ ಕಾರಣ ಹುಡುಕಿ
ನಾನೇ ಕ್ಯಾತೆ ತೆಗೆದಿದ್ದೇನೆ
ಮೌನ ಬಂಗಾರವೆಂದು ಗೊತ್ತಿದ್ದರೂ..
ಆದರೂ,
ಗೆಲುವಿಗಿಂತ ಸೋಲೇ ಹೆಚ್ಚು ಅಪ್ಯಾಯ
‘ಗೆದ್ದರೆ ಮತ್ತೇನಿದೆ ಯುದ್ದದಲ್ಲಿ?’
ಹೀಗಾಗಿ, ಸೋಲುತ್ತಲೇ ಇರುತ್ತೇನೆ
ನಿರಂತರ…!
-ಮಧುಸೂದನ್ ಬೆಳಗುಲಿ, ಮಡಿಕೇರಿ
*****