ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ಆಯೋಜನೆ: ಆಂಧ್ರ ಪ್ರದೇಶದ ಗಡೇಕಲ್ ನಲ್ಲಿ ಮನಸೂರೆಗೊಂಡ ಗಡಿನಾಡ ಉತ್ಸವ

ಬಳ್ಳಾರಿ, ಮಾ.30: ನೆರೆಯ ಆಂಧ್ರಪ್ರದೇಶದ ಗಡೇಕಲ್ಲು ಗ್ರಾಮದ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಬುಧವಾರ ನಡೆದ ಗಡಿನಾಡು ಉತ್ಸವ-೨೦೨೩ ಮನಸೂರೆಗೊಂಡಿತು.
ಹಳೇ ದರೋಜಿಯ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ (ರಿ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ “ಭಾರತ ಸ್ವಾತಂತ್ರ್ಯ ಅಮೃತೋತ್ಸವ ಹಾಗೂ ಅಮೃತ ಭಾರತಿಗೆ ಕನ್ನಡದ ಆರತಿ’ ಅಂಗವಾಗಿ ಗಡಿನಾಡು ಉತ್ಸವ-೨೦೨೩, ಕರ್ನಾಟಕ ಆಂಧ್ರ ಗಡಿಭಾಗದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ, ಐತಿಹಾಸಿಕ ನಾಟಕ ಪ್ರದರ್ಶನ, ದೇಶಭಕ್ತಿಗೀತೆಗಳ ಸಮೂಹ ನೃತ್ಯ, ಗೀತಾಗಾಯನ ಹಾಗೂ ಸನ್ಮಾನ ಕಾರ್ಯಕ್ರಮಗಳು ನೆರೆದಿದ್ದ ರಂಗ, ಸಂಗೀತ ಪ್ರಿಯರನ್ನು ಮುದಗೊಳಿಸಿದವು.


ಕಾರ್ಯಕ್ರಮವನ್ನು ಡೋಲ್ ಬಾರಿಸುವುದರ ಮೂಲಕ ಉದ್ಘಾಟಿಸಿದ ಅನಂತಪುರ ಜಿಲ್ಲಾ ಪಂಚಾಯತಿ ಸದಸ್ಯ ಹನುಮಂತು ವಿ ಅವರು ಮಾತನಾಡಿ, ಕರ್ನಾಟಕ ಆಂಧ್ರ ಗಡಿಭಾಗದ ಕಲೆ ಸಾಹಿತ್ಯ, ಸಂಸ್ಕೃತಿ ಮತ್ತು ಶೈಕ್ಷಣಿಕ ಸ್ಥಿತಿಗತಿ ವಿಶಿಷ್ಟವಾಗಿದ್ದು ಉಭಯ ರಾಜ್ಯ ಸರಕಾರಗಳು ಒಂದೂಗೂಡಿ ವಿಶೇಷವಾದ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ನಿರಂತರವಾಗಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ರಾಷ್ಟ್ರೀಯ, ಅಂತರಾಷ್ಟೀಯ ವಿಚಾರಸಂಕಿರಣಗಳನ್ನು ಹಮ್ಮಿಕೊಂಡು ಜನರಿಗೆ ಜಾಗೃತಿ ಮತ್ತು ಮೌಲ್ಯಗಳನ್ನು ತಿಳಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.


ಮುಖ್ಯ ಅತಿಥಿ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹೆಚ್ ತಿಪ್ಪೇಸ್ವಾಮಿ ಅವರು ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಡಾ. ಅಶ್ವ ರಾಮು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಕರ್ನಾಟಕ ಆಂಧ್ರ ಗಡಿಭಾಗದ ಸಾಂಸ್ಕೃತಿಕ ಸ್ಥಿತಿಗತಿ ಕುರಿತು ರಂಗನಿರ್ದೇಶಕ ವೈ ಮಂಜುನಾಥ, ಕರ್ನಾಟಕ ಆಂಧ್ರ ಗಡಿಭಾಗದ ಶೈಕ್ಷಣಿಕ ಸ್ಥಿತಿಗತಿ ವಿಷಯದ ಕುರಿತು ಸುನಿಲ್ ಕುಮಾರ್ ಮತ್ತು ರಾಜ ಕೆ ಅವರು ಮಾತನಾಡಿ ಗಡಿಭಾಗದ ಕನ್ನಡ ಶಾಲೆಗಳ ಮಕ್ಕಳು ಹತ್ತು ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ವಿಷಾಧಿಸಿದರು. ವಂಚಿತ ಮಕ್ಕಳಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡೇಕಲ್ಲು ಮಂಡಲ ಅಧ್ಯಕ್ಷ ಕರಣಂ ಪುಷ್ಪಾವತಿ ಅವರು ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ, ಬುರ‍್ರಕಥಾ ಶಿವಮ್ಮ, ಗ್ರಾಮದ ಸದಸ್ಯರಾದ ಟಿ ಸುಶಿಲಾ, ಕರಣಂ ಭೀಮಾರೆಡ್ಡಿ, ಎಂ ಪಂಪಾಪತಿ, ಭೀಮಲಿಂಗಪ್ಪ, ಉಮಾಶಂಕರ್, ಗುಂತಕಲ್ಲು ಮೋತಿ ಆಂಜಿನೇಯ, ಲಿಂಗನ್ನ, ಮಹೇಂದ್ರ ಮುಂತಾದವರು ಉಪಸ್ಥಿತರಿದ್ದರು


ನಂತರ ದೇಶಭಕ್ತಿ ಗೀತೆಗಳ ಸಮೂಹ ನೃತ್ಯ, ಸಂಗೊಳ್ಳಿ ರಾಯಣ್ಣ ಐತಿಹಾಸಿಕ ನಾಟಕ ಪ್ರದರ್ಶನ, ಬೊಬ್ಬಿಲಿ ಗಡೇಕಲ್ಲು ನಾಗಿರೆಡ್ಡಿ ಬರ‍್ರಕಥಾ ಪ್ರದರ್ಶನ, ಅಕ್ಕನಾಗಲಾಂಬಿಕೆ ನಾಟಕ ಪ್ರದರ್ಶನ , ಜಾನಪದ ಗಾಯನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವು ಜನರಿಗೆ ಮೆಚ್ಚುಗೆಗೆ ಪಾತ್ರವಾದವು. , ನಿರೂಪಣೆ ಸುನಿಲ್ ಕುಮಾರ್, ವಂದನಾರ್ಪಣೆಯನ್ನು ಅಶ್ವ ಸುರೇಶ, ನೆರವೇರಿಸಿದರು.


*****