ಅನುದಿನ ಕವನ-೮೨೧, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ, ಹುನಗುಂದ ಕವನದ ಶೀರ್ಷಿಕೆ: ನಾಳೆಯೇ ಹಬ್ಬ

ನಾಳೆಯೇ ಹಬ್ಬ

ಸಿಟ್ಟಾಗೀ ಅಂತ ಸಿಟ್ಟಾಗೂದಿಲ್ಲ ಬಿಡು
ಕಳೆದು ಉಳಿದವುಗಳ
ಜೊತೆ ಇರುತೀನಿ ಬಿಡು

ತೂಕ ಮಾಡಿ ಮಾತಾಡಿ ಉಳಿದ
ಮಾತುಗಳ ಮುಚ್ಚಿಟ್ಟುಕೊಂಡೀನಿ
ನಕ್ಕಾಗ ಉದುರಿದ ಮುತ್ತುಗಳ
ಬಾಚಿಟ್ಟುಕೊಂಡೀನಿ

ಹಠಮಾಡಿ ಮಲಗಿದಾಗಿನ
ಮುಗ್ಧತೆಯ ತೆಗೆದಿಟ್ಟುಕೊಂಡೀನಿ
ಅವಸರದಾಗಿನ ಸಮಯ ಪ್ರಜ್ಞೆ
ನೆನಪಿಟ್ಟುಕೊಂಡೀನಿ

ಆರಾಮಿಲ್ಲದಾಗಿನ ಕನವರಿಕೆ
ಕಾಪಿಟ್ಟುಕೊಂಡೀನಿ
ಗದರುವಾಗಿನೊಳಗಿನ ಕಾಳಜಿ
ಅಚ್ಚೊತ್ತಿಕೊಂಡೀನಿ

ಬೇಕೆಂದಿದ್ದ ಸಾಕೆನ್ನುವಷ್ಟು
ಕೊಟ್ಟಿದ್ದ ಎದೆಯಲಿಟ್ಟುಕೊಂಡೀನಿ
ಬರಗಾಲಕೆಂದು ಬಳಕ
ಹಾಕಿಟ್ಟುಕೊಂಡಿದ್ದನ್ನು
ಬಳಸಿಕೊಳ್ಳುತೀನಿ ಬಿಡು

ಜೀವನ ಅವಕಾಶ ಖುಷಿ
ಐಸಿರಿ ಮನೆ ಕಾರುಗಳನೆಲ್ಲ ಕೊಟ್ಟು
ಹರಸಿದ ದೇವರಿಗೂ ನಿನಗೂ
ಏನು ವ್ಯತ್ಯಾಸ ಹೇಳು

ಈ ಸಿಟ್ಟೊಂದ ಬಿಟ್ಟು

ಏನೂ ನಕ್ಕು ಬಿಟ್ಯಾ?
ನಾಳೆಯೇ ಹಬ್ಬ


-ನಿಂಗಮ್ಮ ಭಾವಿಕಟ್ಟಿ, ಹುನಗುಂದ.
*****