ಅನುದಿನ ಕವನ-೮೨೨, ಕವಿ:ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ

ಎಂದರೆ ಯಾರೇ ಆದರೂ ಅರೆಕ್ಷಣ ಅವಕ್ಕಾಗಬಹುದು. ನಿಜ ಎಲ್ಲರೂ ಹೆದರುವುದು ಪ್ರೀತಿಗಲ್ಲ, ಆ ‘ಪ್ರೀತಿ’ ಎಂಬ ಪದದ ಪೂರ್ವ ನಿಶ್ಚಿತ ಪರಿಕಲ್ಪನೆಗೆ!

ಪ್ರೀತಿ ಎಂದರೆ ವಿಶೇಷವೇನಲ್ಲ;
ಅದು ಪರಿಚಯ, ಸ್ನೇಹದ ನಂತರದ ಸ್ಥಿತಿ.

ಅದು ನಮ್ಮದೇ ಅನ್ನಿಸುವ ಭಾವ – ಪ್ರೀತಿ:
ಹಾಗೆಂದೇ ನನ್ನ ಹುಟ್ಟು ಊರು, ಬಾಲ್ಯದ ನೆನಪುಗಳು,
ಬದುಕಿನಲ್ಲಿ ಬಂದ ಸಂಗತಿಗಳು ಸಂದ ಸ್ನೇಹಿತರು
ಮರ ಗಿಡ ಬಳ್ಳಿ ಕಲ್ಲು ಬಂಡೆ ಪ್ರಾಣಿ ಕೀಟ
ಕೀಟಲೆ ಮಾಡಿದವರು ಕನಿಕರಿಸಿದವರು… ಎಲ್ಲಾ ಸಂಗತಿಗಳ ಮೇಲೆ ನಮಗೆ ಅವಿರತ ಪ್ರೀತಿ

ಈ ಪ್ರೀತಿಯ ರೀತಿ ಎಂಬುದು ರತಿಯಲ್ಲ
ಅದು ಅನುರಕ್ತಿ.

ನಾನು ಪ್ರೀತಿಸುವ ವ್ಯಕ್ತಿಯ: ಸ್ವಭಾವ ಸಂಕಟ ನೋವು
ತಳಮಳ ತಲ್ಲಣ ಕೋಪ ತಾಪ ಸಿಟ್ಟು ಹತಾಶೆ ಅಳಲು ಅಳು ಎಲ್ಲವೂ ನನ್ನವು.

ನಾನವರ ಭಾವಗಳಿಗೆ ಕನ್ನಡಿ ಅಷ್ಟೇ ಅಲ್ಲ
ಅವರ ನುಡಿಗಳಿಗೆ ಕಿವಿ
ಹತಾಶೆಗೆ ಹೆಗಲು ಮತ್ತು ಅಳು ಅಳಲಿಗೆ ಮಡಿಲು

ಪ್ರೀತಿಸುವುದೆಂದರೆ ಅವರನ್ನು ಅವರಾಗಿ ಇಡಿಇಡಿಯಾಗಿ ಸ್ವೀಕರಿಸುವುದು. ಯಾವುದೇ ಷರತ್ತಿಲ್ಲದೇ, ಕರಾರಿಲ್ಲದೇ
ಅವರೂ ನನ್ನನ್ನು ನನ್ನಷ್ಟೇ ಪ್ರೀತಿಸಬೇಕು ಎಂಬ ಕನಿಷ್ಟ ಕೋರಿಕೆಯೂ ಇಲ್ಲದೇ

ಹೌದು

ನಾನು ನಿನ್ನನ್ನು ಪ್ರೀತಿಸುತ್ತೇನೆ

-ಡಾ. ಆನಂದ್ ಋಗ್ವೇದಿ, ದಾವಣಗೆರೆ
*****