ಇದು ಕವಿಯ ಕಾವ್ಯದೊಲವಿನ ಕವಿತೆಯೂ ಹೌದು. ಚೆಲುವಿನೊಲವಿನ ಭಾವಗೀತೆಯೂ ಹೌದು. ಪದ್ಯಕೂ, ಪ್ರೇಮಕೂ ಅದೆಂತಹ ಅಪೂರ್ವ ಅವಿನಾಭಾವವಿದೆ. ಒಲವಿನಾರಧನೆಯಲ್ಲಿ ಪ್ರತಿ ಪದವೂ ಕಾವ್ಯವಾಗುವುದು. ಸತ್ಯಕಾವ್ಯ ಕಲ್ಪನೆಯಲ್ಲಿ ಒಲವಿನ ಪ್ರತಿ ಭಾವಸಂಪದವೂ ದಿವ್ಯ ನೈವೇದ್ಯವಾಗುವುದು ಅಂತಾರೆ ಕವಿ ಎ.ಎನ್.ರಮೇಶ್.ಗುಬ್ಬಿ. ಅವರು!
ಬಾರೆನ್ನ ಒಲವೇ..!
ಮುಗಿಲಿಂದ ಇಳೆಗಿಳಿವ ಹೊಂಬೆಳಕಂತೆ
ಬಾರೆನ್ನ ಎದೆಯ ಬಾಂದಳಕೆ ಒಲವೆ
ಪುಳಕಿಸಿ ಪೃಥ್ವಿಯ ಪಸರಿಪ ಕಿರಣಗಳಂತೆ
ನಗೆಯಿಂದ ಹೃದಯ ಬೆಳಗು ಚೆಲುವೆ.!
ವನರಾಶಿಯಿಂದ ಸುಳಿವ ತಂಗಾಳಿಯಂತೆ
ಬಾರೆನ್ನ ಮನದ ಅಂಗಳಕೆ ಅನುರಾಗವೆ
ಸ್ಪರ್ಶಿಸುತ ಮುದವೀವ ಮಾರುತದಂತೆ
ನುಡಿಯಿಂದ ತನುಮನ ತಣಿಸು ಚೆಲುವೆ.!
ಬಾನಿಂದ ಬೀಗುತ್ತ ಬರುವ ಬೆಳದಿಂಗಳಂತೆ
ಬಾರೆನ್ನ ಹೃದಯ ಮಂದಿರಕೆ ಪ್ರೇಮವೆ
ಬೆಳಕಿಡುತ ಹೊಳೆವ ಚಂದ್ರಿಕೆ ಕಾಂತಿಯಂತೆ
ನೋಟದಿಂದ ಬೆಳಕಾಗಿಸಿ ಮಿನುಗು ಚೆಲುವೆ.!
ಅಧರವ ಮೆಲ್ಲನೊತ್ತಿ ಹರಿವ ಉಸಿರಂತೆ
ಬಾರೆನ್ನ ಜೀವಗೊಳಲ ನುಡಿಸುತ ಒಲವೆ
ಸ್ವರವಿಡುತ ಮೊರೆವ ಮಧುರ ರಾಗದಂತೆ
ನಾದದಿಂದ ನರನರಗಳ ನಲಿಸು ಚೆಲುವೆ.!
ಕನಸು ಕಲ್ಪನೆಗಳ ಆವರಿಸಿರುವ ಕಾವ್ಯಕನ್ನಿಕೆ
ಬಾರೆನ್ನ ಭಾವಭಿತ್ತಿಯ ಬೆಳಗುವ ಪದ್ಯವಾಗು
ಚಿತ್ತದಂಗಳಕೆ ಚಿರ ಚೈತನ್ಯವೀವ ವಾದ್ಯವಾಗು.!
ಅಕ್ಷರಕ್ಷರಕು ನಿತ್ಯ ಅಕ್ಕರೆಯ ಸಾನಿಧ್ಯವಾಗು.!
ಬಾರೆನ್ನ ಒಲವೇ ಜೀವಭಾವದ ನಿತ್ಯಬಲವೆ
ಬಾರೆನ್ನ ಚೆಲುವೆ ಆಂತರ್ಯದ ಕಾವ್ಯಜಲವೆ
ಬಾರೆನ್ನ ಒಲವೇ ಹೃನ್ಮನಗಳ ಭವ್ಯನಿಲುವೆ
ಬಾರೆನ್ನ ಚೆಲುವೆ ಭಾವಭಾಷ್ಯಗಳ ದಿವ್ಯಫಲವೆ.!
-ಎ.ಎನ್.ರಮೇಶ್.ಗುಬ್ಬಿ, ಕಾರವಾರ