ಅನುವಾದಕರ ಪರಿಚಯ: ಡಾ.ಸಿ.ವೈ.ಸುದರ್ಶನ್ ಅವರು ದಾವಣಗೆರೆಯ ಜೆ.ಜೆ.ಎಂ.ಮೆಡಿಕಲ್ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ವೃತ್ತಿಯಲ್ಲಿ ಮನೋವೈದ್ಯರು.ಕವಿ,ಅನುವಾದಕರು ಮತ್ತು ಬರಹಗಾರರು.ಹಲವು ಬರಹಗಳು ಪ್ರಜಾವಾಣಿ,ಸುಧಾ, ಜನತಾವಾಣಿಯಲ್ಲಿ ಪ್ರಕಟ.’ಮನಸ್ಸು ಮತ್ತು ಜೀವನ’ಎಂಬ ಕೃತಿಯೂ ಪ್ರಕಟಗೊಂಡಿದೆ.
ಅಮೇರಿಕಾದ ಕವಿ ಲೇಖಕ ರಾಬರ್ಟ್ ಎಂ ಡ್ರೆಕ್ ಅವರ ಪದ್ಯವನ್ನು ಡಾ. ಸುದರ್ಶನ್ ಅವರು ನನ್ನ ಬಯಕೆ ತಲೆಬರಹದಲ್ಲಿ ಚೆಂದವಾಗಿ ಅನುವಾದಿಸಿದ್ದಾರೆ.👇🌺
ನನ್ನ ಬಯಕೆ
ಒಮ್ಮೊಮ್ಮೆ ನಾನು ಬಯಸುತ್ತೇನೆ
ಗಡಿಯಾರದ ಮುಳ್ಳುಗಳ ಹಿಂದೆ ಸರಿಸಬೇಕೆಂದು
ಗತಿಸಿದ ಸಂಗತಿಗಳ ಬದಲಾಯಿಸಬೇಕೆಂದಲ್ಲ
ಆದರೆ
ಕೆಲ ಸಂಗತಿಗಳ ಮತ್ತೆ ಅನುಭವಿಸಲು
ಕೆಲವೊಮ್ಮೆ ನಾನು ಬಯಸುತ್ತೇನೆ
ಸ್ವಲ್ಪ ಕಾಲ ಮತ್ತೆ ಕೂಸಾಗಬೇಕೆಂದು
ತಳ್ಳುಗಾಡಿಯಲ್ಲಿ ತಳ್ಳಿಸಿಕೊಳ್ಳಬೇಕೆಂದಲ್ಲ
ಆದರೆ
ನನ್ನಮ್ಮನ ಮುಗುಳ್ನಗೆ ನೋಡಲು
ಕೆಲವೊಮ್ಮೆ ನಾನು ಬಯಸುತ್ತೇನೆ
ಮತ್ತೆ ನನ್ನ ಶಾಲೆಯತ್ತ ಮುಖಮಾಡಬೇಕೆಂದು
ಮತ್ತೆ ಮಗುವಾಗಬೇಕೆಂದಲ್ಲ
ಆದರೆ
ಶಾಲೆಯ ನಂತರ ಮುಖನೋಡದ ಒಡನಾಡಿಗಳ
ಸಂಗಡ ಮತ್ತೆ ಸಂತಸದಿಂದಿರಲು
ಕೆಲವೊಮ್ಮೆ ನಾನು ಬಯಸುತ್ತೇನೆ
ಮತ್ತೆ ಕಾಲೇಜಿನತ್ತ ಕಾಲಿಡಬೇಕೆಂದು
ಮತ್ತೆ ಬಂಡಾಯಗಾರನಾಗಬೇಕೆಂದಲ್ಲ
ಆದರೆ
ಆಗ ಓದಿದ್ದನ್ನು
ಅರ್ಥಮಾಡಿಕೊಳ್ಳಲು
ಕೆಲವೊಮ್ಮೆ ನಾನು ಬಯಸುತ್ತೇನೆ
ನನ್ನ ಕೆಲಸದಲ್ಲಿ ಹೊಸಬನಾಗಲು
ಕಡಿಮೆ ಕೆಲಸ ಮಾಡಬೇಕೆಂದಲ್ಲ
ಆದರೆ
ಮೊದಲ ಪಗಾರದ ಖುಷಿ ನೆನಪಿಸಿಕೊಳ್ಳಲು
ಕೆಲವೊಮ್ಮೆ ನಾನು ಬಯಸುತ್ತೇನೆ
ನನ್ನ ಮಕ್ಕಳು ಮತ್ತೆ ಚಿಕ್ಕವರಾಗಬೇಕೆಂದು
ಅವರು ಬೇಗ ದೊಡ್ಡವರಾದರಂತರಲ್ಲ
ಆದರೆ
ಅವರೊಡನೆ ಮತ್ತೆ ಕುಣಿದು ಕುಪ್ಪಳಿಸಲು
ಕೆಲವೊಮ್ಮೆ ನಾನು ಬಯಸುತ್ತೇನೆ
ಜೀವಿಸಲು ಇನ್ನೂ ಹೆಚ್ಚು ಸಮಯವಿರಬೇಕೆಂದು
ಹೆಚ್ಚು ಕಾಲ ಬದುಕಬೇಕಂತಲ್ಲ
ಆದರೆ
ನಾನು ಇತರರಿಗೆ ಏನು ನೀಡಬಲ್ಲೆನೆಂದರಿಯಲು
ಗತಿಸಿದ ಘಳಿಗೆಗಳೆಲ್ಲ ಮರುಕಳಿಸದಿರುವುದರಿಂದ
ಈಗಿನ ಕ್ಷಣಗಳ ಜೀವಿಸುತ್ತಾ ಸವಿಯೋಣ
ಉಳಿದ ಜೀವನವ ಸಂಭ್ರಮಿಸೋಣ
ಪ್ರತಿ ಕ್ಷಣ ಪ್ರತಿ ದಿನ
-ಡಾ ಸಿ.ವೈ ಸುದರ್ಶನ್, ದಾವಣಗೆರೆ
*****