ನಾಡೋಜ ಬೆಳಗಲ್ಲು ವೀರಣ್ಣ ಅವರ ಕಲಾ ಸೇವೆ ಅನನ್ಯ – ಮಹಾರಾಷ್ಟ್ರ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ

ಬಳ್ಳಾರಿ, ಏ.9: ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕ್ರೀಡಾ ಕ್ಷೇತ್ರವನ್ನು ಪ್ರತಿನಿಧಿಸುವರು ದೇಶದ ಆಸ್ತಿ ಎಂದು ಮಹಾರಾಷ್ಟ್ರದ ಮಾಜಿ ಉಪ ಸಭಾಪತಿ ಹಾಗೂ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ ಅವರು ತಿಳಿಸಿದರು.
ರೂಪನ ಗುಡಿಯ ಶ್ರೀ ಮಾರುತಿ ತೊಗಲು ಗೊಂಬೆ ಟ್ರಸ್ಟ್ ಶನಿವಾರ ಸಂಜೆ ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ಸಂತಾಪ‌-ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರ ಕಲಾ ಸೇವೆ ಅನನ್ಯ. ಕೇಂದ್ರ ಸರಕಾರ ಮರಣೋತ್ತರವಾಗಿ ಪದ್ಮ ಅಥವಾ ಇದಕ್ಕಿಂತಲೂ ಮಿಗಿಲಾದ ಪ್ರಶಸ್ತಿ, ಪುರಸ್ಕಾರಗಳೊಂದಿಗೆ ಇವರನ್ನು ಗೌರವಿಸಬೇಕು ಎಂದು ಹೇಳಿದರು.
ಕಲೆ ಮತ್ತು ಕಲಾವಿದರಿಗೆ ಯಾವುದೇ ಜಾತಿ, ಭಾಷೆ, ಗಡಿ ಇಲ್ಲ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ರಮೇಶಗೌಡ ಪಾಟೀಲ್ ಅವರು ಮಾತನಾಡಿ, 1982ರಿಂದಲೂ ಬೆಳಗಲ್ಲು ವೀರಣ್ಣ ಅವರೊಂದಿಗೆ ರಂಗ ಒಡನಾಟವಿದೆ. ರಕ್ತರಾತ್ರಿಯ ಅವರ ಶಕುನಿ ಪಾತ್ರವನ್ನು ಯಾರೂ ಮೀರಿಸಲಾರರು. ಪ್ರತಿಭಾವಂತ ಮೇಧಾವಿ, ವಿನಯಶೀಲರು ಎಂದು ಕೊಂಡಾಡಿದರು.
ಹತ್ತಾರು ಸಾಮಾಜಿಕ ನಾಟಕಗಳಿಗೂ ತರಬೇತಿ ನೀಡಿದ ವೀರಣ್ಣ ಅವರು
ಕನ್ನಡ ನಾಡಿನಲ್ಲಿ ಮತ್ತೇ ಹುಟ್ಟಿ ಬರಲಿ ಎಂದು ಆಶಿಸಿದರು.


ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಟಿಎಚ್ ಎಂ ಬಸವರಾಜ್, ಅವಿಭಜಿತ ಬಳ್ಳಾರಿ ಸಾಂಸ್ಕೃತಿಕ ಜಿಲ್ಲೆಗೆ ಕೀರ್ತಿ ತಂದಿರುವ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸ ಬೇಕಿತ್ತು ಎಂದು ಹೇಳಿದರು.


ಹಿರಿಯ ಮುಖಂಡ‌ ಕಲ್ಲುಕಂಬ ಪಂಪಾಪತಿ ಅವರು ಮಾತನಾಡಿ, ಕಲಾವಿದರಿಗೆ ಆದರ, ಉತ್ತೇಜನ ಕಡಿಮೆಯಾಗುತ್ತಿದೆ‌ ಎಂದು ವಿಷಾಧಿಸಿದರು. ಹಂಪಿ ಉತ್ಸವದ ರೂವಾರಿ ಎಂ.ಪಿ ಪ್ರಕಾಶ್ ಅವರು ರಂಗಭೂಮಿ, ಕಲೆ ಮತ್ರು
ಕಲಾವಿದರಿಗೆ ಮಹತ್ವ ನೀಡಿದ್ದರು ಎಂದು ಸ್ಮರಿಸಿದರು. ಪ್ರಸಿದ್ಧ ನಾಟಕಕಾರ
ಕಂದಗಲ್ಲು ಹನುಮಂತರಾಯ ಅವರು ಯಲಿವಾಳ ಸಿದ್ದಯ್ಯ ಅವರಿಗಾಗಿ ಅಶ್ವತ್ಥಾಮ, ಬೆಳಗಲ್ಲು ವೀರಣ್ಣ ಅವರಿಗಾಗಿ ಶಕುನಿ ‌ಪಾತ್ರ ಸೃಷ್ಟಿಸಿದ್ದಾರೆ ಎನ್ನುವಷ್ಟರಮಟ್ಟಿಗೆ ಈ ಇಬ್ಬರೂ ಹಿರಿಯರು ಪಾತ್ರಗಳಿಗೆ ಜೀವ ತುಂಬುತ್ತಿದ್ದರು ಎಂದು ತಿಳಿಸಿದರು.
ಕಲೆ ಸಾಹಿತ್ಯ, ಕಲಾವಿದರಿಗೆ ನೆರವು ನೀಡಬೇಕು…ಅರ್ಹರಿಗೆ ಪ್ರಶಸ್ತಿ ಗೌರವಗಳು ವಂಚನೆಯಾದಾಗ ಸಾರ್ವಜನಿಕರು ದನಿ ಎತ್ತಬೇಕು ಎಂದರು.
ತುಂಗಭದ್ರಾ ರೈತ ಸಂಘದ ಮುಖಂಡ ದರೂರು ಪುರುಷೋತ್ತಮ ಗೌಡ ಅವರು ಮಾತನಾಡಿ ಬೆಳಗಲ್ಲು ವೀರಣ್ಣ ಅವರು ತಮ್ಮ ತಂದೆ‌ಯವರ ರಂಗ ಒಡನಾಡಿ. ಹಲವು ನಾಟಕಗಳಲ್ಲಿ ಉಭಯರು ಒಟ್ಟಿಗೆ ನಟಿಸಿದ್ದಾರೆ ಎಂದು ನೆನಪಿಸಿದರು.
ಸಾಂಸ್ಕೃತಿಕ ರಾಯಭಾರಿಗಳಾದ ಎಂ. ಪಿ ಪ್ರಕಾಶ್ ಮತ್ತು
ನಾಡೋಜ ಬೆಳಗಲ್ಲು ವೀರಣ್ಣ ಅವರ ಸವಿನೆನಪಿಗಾಗಿ ನಗರದಲ್ಲಿ ಸೂಕ್ತ ಗೌರವ ದೊರೆಯಬೇಕು ಎಂದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ಮಾತನಾಡಿ, ಬೆಳಗಲ್ಲು ವೀರಣ್ಣ ಅವರು ಪ್ರಶಸ್ತಿಗಳಿಗೆ ಅತೀತರಾದವರು. ರಂಗ, ಜಾನಪದ ಪ್ರಿಯರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.  ಬಡತನದಲ್ಲಿ ಹುಟ್ಟಿ ನಾಡಿಗೆ ಕೀರ್ತಿ ತಂದ ಮಹನೀಯರು. ವೀರಣ್ಣ ಅವರ ಅಕಾಲಿಕ ಸಾವು ಕರ್ನಾಟಕ ಕಲಾ ಕ್ಷೇತ್ರಕ್ಕೆ ದೊಡ್ಡ‌ನಷ್ಟ ಎಂದು ಕಂಬನಿ‌ ಮಿಡಿದರು.


ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಅವರು ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಡಿಗೆ, ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರನ್ನು ನಗರದಿಂದ 15 ಕಿ.ಮೀ ದೂರದಲ್ಲಿ ಅಂತಿಮ‌ ಸಂಸ್ಕಾರ ನೆರವೇರಿಸಿದ್ದು ನಾಡಿನ ಸಾಂಸ್ಕೃತಿಕ ಲೋಕದ ದೌರ್ಭಾಗ್ಯ ಎಂದು ವಿಷಾಧಿಸಿದರು.
ಬಳ್ಳಾರಿ ನಗರದಲ್ಲಿ ಸುಮಾರು ಐದರಿಂದ ಹತ್ತು ಎಕರೆ ಪ್ರದೇಶದಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕಲಾ ಕ್ಷೇತ್ರವನ್ನು ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.


ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್, ದೇಶದ ಆಸ್ತಿಯಾಗಿರುವ ಪ್ರಸಿದ್ಧ ರಂಗ ಕಲಾವಿದ ಬೆಳಗಲ್ಲು ವೀರಣ್ಣ ಅವರ ಒಡನಾಟ ಪೂರ್ವ ಜನುಮದ ಪುಣ್ಯ. ಅವರ ಒಡನಾಟದ ಕ್ಷಣಗಳನ್ನು ವಿವರಿಸುತ್ತಾ ಗದ್ಗಿತರಾಗಿ ಕಣ್ಣೀರಾದರು. ಅವರ ನಡೆದುಬಂದ ದಾರಿಯಲ್ಲಿ ನಡೆಯಬೇಕು.ಭೌತಿಕವಾಗಿಯಷ್ಟೇ ಅಗಲಿರುವ ವೀರಣ್ಣ ಅವರ ರಂಗಭೂಮಿ ಜಾನಪದ ಲೋಕದ ಕನಸುಗಳು ನನಸಾಗಬೇಕು ಎಂದರು.
ರಂಗ ಕರ್ಮಿ ಜಗದೀಶ್ ಅವರು, ನಾಡೋಜ ಮನ್ಸೂರು ಸುಭದ್ರಮ್ಮ ಮತ್ತು ನಾಡೋಜ ಬೆಳಗಲ್ಲು ವೀರಣ್ಣ ಅವರು ನಾಡಿನ ರಂಗಭೂಮಿಯ ಎರಡು ನಕ್ಷತ್ರಗಳು ಎಂದು ಬಣ್ಣಿಸಿದರು. ವೀರಣ್ಣ ಸೌಮ್ಯವಾದಿಯಾಗಿದ್ದರು. ವಾರನ್ನ ಊಟ ಮಾಡಿ ಅಭಿನಯ ಕಲಿತವರು. ಇಂತಹವರು ಶತಮಾನಕ್ಕೆ ಒಬ್ಬರು ಎಂದು ಶ್ಲಾಘಿಸಿದರು.


ಬಯಲಾಟ ಯುವ ಸಂಘಟಕ ವಡ್ಡು ಗ್ರಾಮದ ಬಂಡ್ರಿ ಯಂಕಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದ ವೀರಣ್ಣ ಅವರ ನಿಧನದಿಂದ ಸಾಂಸ್ಕೃತಿಕ ಲೋಕದ ಕೊಂಡಿಯೊಂದು ಕಳಚಿತು.
ಕನ್ನಡ ವಿವಿಯಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಂಗ ತೋರಣದ ಕಪ್ಪಗಲ್ಲು ಪ್ರಭುದೇವ, ಕಲಾಧೀಮಂತ ಬೆಳಗಲ್ಲು ವೀರಣ್ಣ ಅವರ ಹೆಸರು
ತೊಗಲುಗೊಂಬೆ ಕಲೆ ಇರುವವರೆಗೂ ಅಜರಾಮರವಾಗಿರುತ್ತದೆ ಎಂದರು.


ವೀರಣ್ಣ ಅವರ ಮೊಮ್ಮಗ ಗಗನ ಕುಮಾರ ಮಾತನಾಡಿ ತಾತನವರು ಕುಟುಂಬಕ್ಕಿಂತ ಸಮಾಜಕ್ಕೆ ಹೆಚ್ಚು ಮಹತ್ವ ನೀಡಿದ್ದರು. ರಂಗಭೂಮಿ, ಕಲೆಗೆ ಮೊದಲ ಆದ್ಯತೆ ಬಳಿಕ ಕುಟುಂಬಕ್ಕೆ ಎಂದರು. ಕೊನೆ ಕಾಲದವರೆಗೂ ಕಲೆಗಾಗಿ ಬದುಕಿದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರು ಮಾತನಾಡಿ, ನಾಡೋಜ ಬೆಳಗಲ್ಲು ವೀರಣ್ಣ ಅವರ ತತ್ವಾದರ್ಶಗಳನ್ನು ಪಾಲಿಸಿದರೆ ನಾವೆಲ್ಲಾ ಅವರಿಗೆ ನೀಡುವ ಗೌರವ ಎಂದರು.
ಸಾಂಸ್ಕೃತಿಕ ಹಿನ್ನಲೆಯ ಜನಪ್ರತಿಗಳಿದ್ದರೆ ಕಲಾವಿದರಿಗೆ, ಕಲಾ ಕ್ಷೇತ್ರಕ್ಕೆ ಹೆಚ್ಚು ಮನ್ನಣೆ ದೊರೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೀರಣ್ಣ ಅವರೇ ಕಲಿಸಿದ ತೊಗಲುಗೊಂಬೆ ಗೀತೆಯನ್ನು ಯುವ ಗಾಯಕಿ ಎಸ್. ಅಭಿನಯ ಹಾಡಿ ಗಮನ ಸೆಳೆದಳು.


ಕಾರ್ಯಕ್ರಮದಲ್ಲಿ ಬಯಲಾಟ ಪರಿಷತ್ ಅಧ್ಯಕ್ಷ ನಾಗನಗೌಡ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹೆಚ್. ತಿಪ್ಪೇಸ್ವಾಮಿ, ಹಿರಿಯ ಪತ್ರಕರ್ತ ಎಂ.ಇ. ಜೋಷಿ, ರಕ್ಷಣಾ ವೇದಿಕೆ ಶೇಖರ್, ನಾಟಕ ಉಪನ್ಯಾಸಕ ಅಣ್ಣಾಜಿ ಕೃಷ್ಣಾರೆಡ್ಡಿ, ಕನ್ನಡ ಉಪನ್ಯಾಸಕ ಚಾಂದ್ ಭಾಷ, ಹುಲುಗಣ್ಣ, ಈಡಿಗ ಸಮುದಾಯದ ಯುವ ಮುಖಂಡ ಟಿ.ಸುನೀಲ್ ಕುಮಾರ್, ಕಲಾವಿದ ಅಮರೇಶಯ್ಯ, ಹಿರಿಯ ಛಾಯಾಗ್ರಾಹಕ ತಿಪ್ಪೇಸ್ವಾಮಿ, ಪರಮೇಶ್, ವಕೀಲ ಚಂದ್ರಪ್ಪ, ಛಲವಾದಿ ಅಂಬರೀಷ್,  ಆಲಾಪ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ,   ಸಂಘಟಕರಾದ ಬಸವರಾಜ ಬಿಸಿಲಹಳ್ಳಿ, ಅಡವಿಸ್ವಾಮಿ, ಎಸ್.ಎಂ. ಹುಲುಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಆದೋನಿ ವೀಣಾ ಅವರು ರಂಗಗೀತೆ ಮೂಲಕ ಪ್ರಾರ್ಥಿಸಿದರು. ಟ್ರಸ್ಟ್ ನ ಅಧ್ಯಕ್ಷ ಸುಬ್ಬಣ್ಣ ರೂಪನಗುಡಿ, ಖಜಾಂಚಿ ಸಿ.ತುಳಸಿ, ಪ್ರಧಾನ ಕಾರ್ಯದರ್ಶಿ ಸಿ. ಜಯಲಕ್ಷ್ಮಿ ನಿರ್ವಹಿಸಿದರು. ಪದಾಧಿಕಾರಿಗಳಾದ ದುರ್ಗೇಶ್, ಅಕ್ಷಯ ಎಸ್. ಶೈಲಾ ಪಾಚಂಗೆ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಿಸಿದ ಕವಿ, ಉಪನ್ಯಾಸಕ ಎಎಂಪಿ ವೀರೇಶಸ್ವಾಮಿ, ನಾಡೋಜ ಬೆಳಗಲ್ಲು ವೀರಣ್ಣ ಅವರ ಕುರಿತು ಕವನ ವಾಚಿಸಿದರು.
*****