ಅನುದಿನ ಕವನ-೮೩೧, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ಅಕ್ಷರದಾತ

ಮಹಾತ್ಮ ಜ್ಯೋತಿಬಾ ಫುಲೆಯವರ ಜನುಮ ದಿನದ ವಿಶೇಷ ಗಾನಕವಿತೆ

ಅಕ್ಷರದಾತ

ಅಕ್ಷರವೆಂಬುದು
ಅವಿತು ಕುಳಿತಿತ್ತು
ಬಲ್ಲಿದರ ಮನೆಯಲ್ಲಿ..

ಶಿಕ್ಷಣವೆಂದು
ಶಿಕ್ಷೆಗೊಳಪಟ್ಟಿತ್ತು
ಬಹುಜನರಿಗೆ ದಕ್ಕದೇ
ಮನುಸೆರೆಮನೆಯಲ್ಲಿ.

ಅಕ್ಷರವಂತರು ಬರೆದಿದ್ದ
ಸುಳ್ಳುಗಳೇ ಸತ್ಯವಾಗಿತ್ತು
ಸತ್ಯ ಅರಿತವರು
ನಿರಕ್ಷರಕುಕ್ಷಿಗಳಾಗಿದ್ದರು.
ಕಪೋಲ ಕಲ್ಪಿತಗಳೇ
ಕಾಯ್ದೆಗಳಾಗಿದ್ದವು..!

ಪಟ್ಟು ಪೀತಾಂಬರಗಳು
ಉಳ್ಳವರ ಮನೆಯ
ರಕ್ಷಾಕವಚವಾಗಿದ್ದವು
ಹರಿದ ಕಾಶಾಯ ವಸ್ತ್ರಗಳು
ಬಡವರ ಮನೆಯ ಬದುಕ
ಮೇಲ್ಛಾವಣಿಯಾಗಿದ್ದವು..

ಅಕ್ಷರವಿಲ್ಲದ,ಶಿಕ್ಷಣವಿಲ್ಲದ
ಬಹುಜನರ ಬದುಕಿಗೊಂದು
ಜ್ಯೋತಿ ಹೊತ್ತಿತು
ಮಹಾತ್ಮ ಜ್ಯೋತಿಯ
ಅವತಾರವಾಯಿತು
ಮನಮನೆಯೂ ಅಕ್ಷರ ಬೆಳಕಿನ
ಅರಮನೆಯಾಯಿತು..!

ಜ್ಯೋತಿಬಾ ಎಂಬ ಜ್ಞಾನದೀಪಕ್ಕೆ
ಸಾವಿತ್ರಿಬಾಯಿಯೆಂಬ
ತೈಲ ಸೇರಿ,ಮಹಾಜ್ಯೋತಿಯಾಗಿ
ಬುದ್ದ ಭಾರತವ ಪ್ರಬುದ್ದ ಮಾಡಿತು..

ದಡ್ಡ ಮನಗಳ ಪ್ರಬುದ್ದ ಮಾಡಿ
ಬುದ್ದರಾಶಯಗಳ ಎದೆಯಲಿ ಹುದುಗಿಸಿ
ಸಿದ್ದಮನಗಳ ಮಾಡಿದ
ಶುದ್ದ ಪ್ರಸಿದ್ದ ಪ್ರಬುದ್ದ ಫುಲೆಯರಿಗೆ
ನಾಡಿನ ನಲ್ಮನಸುಗಳ
ಋಣಾರ್ಪಣೆ..ಅರ್ಪಣೆ..ಸಮರ್ಪಣೆ


-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ
*****

02:15