ಅನುದಿನ‌ ಕವನ-೮೩೨, ಹಿರಿಯ ಕವಿಯಿತ್ರಿ: ಎಂ ಆರ್ ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ಅಶಾಂತೆಯ ಶಾಂತ!

ಅಶಾಂತೆಯ ಶಾಂತ!

ಕವಿತೆಯೊಂದು ತಾರಸಿಯ ಮೇಲೆ ಕುಣಿಯಿತು, ನಿರ್ಲಕ್ಷಿಸಿದಳು. ಹಿತ್ತಲ ಬಾಗಿಲು ತಟ್ಟಿ ಹೆದರಿಸಿತು, ಕಿವುಡಾದಳು. ಕಿಟಕಿಯಲ್ಲಿ ಇಣುಕಿಣುಕಿ ನೋಡಿದಾಗಂತೂ ಕುರುಡಾದಳು. ಒಂದು ದಿನ ತೀರಾ ಮುಂಬಾಗಿಲನ್ನೇ ಬಡಿದುಬಿಟ್ಟಿತು. ಚಿಲಕವನ್ನು ಭದ್ರಪಡಿಸಿದಳು. ಎದೆಯೊಳಗಿಂದಲೇ ಎದ್ದು ಬಂದಾಗ ತಬ್ಬಿಬ್ಬಾದಳು.

ಕವಿತೆಯೆಂಬ ಕುರುಡು ನೊಣದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬಡಿದು ಬಿಸಾಕಲು ಪೊರಕೆ ಹಿಡಿದು ಓಡಾಡಿದಳು, ಅಡುಗೆ ಮನೆ ಸೇರಿದಳು, ಕೋಣೆಯ ಕದ ಮುಚ್ಚಿದಳು. ಉಹು, ಬಿಡಲೇ ಇಲ್ಲ.ಅಮ್ಮನೇಕೆ ಕಾವ್ಯ ಗಮಲಿನ ಓಲೆಗರಿಗಳ ಕಟ್ಟನ್ನು ಕಟ್ಟಿ ಅಟ್ಟಕೆಸೆದಿದ್ದಳು? ಕವಿತೆಯೆಂದರೆ ಬರಿಯ ಕವಿತೆಯೇ? ಶೃಂಗಾರ, ಹಾಸ್ಯವನ್ನಷ್ಟೇ ಹೊತ್ತು ತರುವುದೇ? ಕರುಣೆಯೊಂದಿಗೆ ರೌದ್ರ, ಭಯಾನಕ, ಬೀಭತ್ಸಗಳಿಲ್ಲವೇ? ತಪ್ಪಿಸಿಕೊಳ್ಳುವುದು ಹೇಗೆ? ಅಯ್ಯೋ!

ಹೊರಗೋಡಿದರೆ ಒಂಟಿತನಕ್ಕೆ ಜಗ್ಗದ ವೀರ ಆಕಾಶ `ಮಿತ್ರ’! ತಲೆ ಎತ್ತಿ ನಿಂತ ಹೂವು, ಕೊಳೆ ತೊಳೆವ ಮಳೆ, ಎಂಥ ಅದ್ಭುತ! `ಶಾಂತರಸ’ವನ್ನು ಕೊನೆಗೆ ಸೇರಿಸಿದಂತೆ ಕವಿತೆಯೊಂದಿಗೆ ಸುಮ್ಮನಿದ್ದುಬಿಟ್ಟಿದ್ದಾಳೆ!


-ಎಂ. ಆರ್. ಕಮಲಾ, ಬೆಂಗಳೂರು
*****