ಅನುದಿನ ಕವನ-೮೩೪, ಕವಿ: ಡಾ. ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಅಂಬೇಡ್ಕರ್ ಬಂದ…..

ಅಂಬೇಡ್ಕರ್ ಬಂದ….

ನಿನ್ನೆ ನಮ್ಮ ಮನೆಗೆ ಅಂಬೇಡ್ಕರ್ ಬಂದ
ಅಮ್ಮ ಮುದ್ದೆ ತಟ್ಟುತ್ತಿದ್ದಳು
ಜೋಡಿಲ್ಲದೆ ಚಿಂತೆಗೀಡಾದಳು

ಆಗ ಮನೆಗೆ ಅಂಬೇಡ್ಕರ್ ಬಂದ
ಬಾಪ್ಪಾ ಎಂದಳು ಅಮ್ಮ
ಬಂದು ಅಡುಗೆಮನೆಯ ಅಮ್ಮನೆದುರು ಕುಳಿತ
ಯಾಕಮ್ಮಾ ಚಿಂತೆ ಎಂದ

ಜೋಡಿಲ್ಲಪ್ಪ ಏನು ಮಾಡಲಿ ಎಂದಳು ಅಮ್ಮ
ಯಾವ ಜೋಡು ತಾಯಿ, ಶತಮಾನಗಳಿಂದ ನನಗೆ
ಒಂದೇ ಜೋಡು ಗೊತ್ತು., ಅದೇ ‘ಕಾಲ್ಮರಿ’
ತಿಳಿಯದ ತಿಳಿಸದ ಹಾದಿಯಲ್ಲಿ ನಡೆದೂ ನಡೆದೂ
ಸೋತು ಹೋಗಿದೆ ಮನದ ಹೆಜ್ಜೆ ಎಂದ

ಬಿಸಿಮುದ್ದೆ ಇದೆ ಮಗ ಅದಕ್ಕೆ ಜೋಡೊಂದಿದ್ದರೆ
ಹೊಟ್ಟೆಗೆ ರುಚಿ ಅಲ್ವಾ ನಿನಗೆ ಎಂದಳು
ಯುವ ಅಂಬೇಡ್ಕರನಿಗೆ ತಿಳಿಯಿತು ಅಮ್ಮನ ಕರುಳ ಹಾಡು

ಅಲ್ಲೆ ಕಳ್ಳಿ ಸಾಲಿನ ಬದುವಲ್ಲೇ ಓಡಿದ
ನೆಗ್ಗಿನ ಮುಳ್ಳಿನ ಎಳೆ ಸೊಪ್ಪು ಹರಿದು ತಂದ
ಅಮ್ಮ ಮಣ್ಣಿನ ಮಡಿಕೆಯನಿಟ್ಟಳು, ಎಣ್ಣೆ ಹನಿಸಿ
ಸಾಸಿವೆ ಜೀರಿಗೆ ಕರಿಬೇವು ಎಣ್ಣೆಗೆ ಚಿಟಕಾಯಿಸಿ
ನಾಲ್ಕು ಕಾಳು ಬೆಳ್ಳುಳ್ಳಿ ಜಜ್ಜಿದಳು
ಹಸಿಮೆಣಸಿನಕಾಯಿ ಬಾಡಿಸಿದಳು, ಮಗನೆದುರೇ
ಈರುಳ್ಳಿಯನ್ನೂ ಒಂದಿಷ್ಟು ಕಣ್ಣಹನಿಯಲ್ಲಿ ಕಾಣಿಸಿದಳು
ಘಮಘಮಿಸುವ ತಾಳಿಸುವ ಸೊಪ್ಪಿನ ಗುಣವಿಟ್ಟು ಕೂಡಿಸಿ ಗುಣಿಸಿದಳು

ತನ್ನೆಲ್ಲಾ ಲೆಕ್ಕಾಚಾರ ಸರಿ ಹೊಂದಿದ ಮೇಲೆ
ನೆಗ್ಗಿನ ಮುಳ್ಳಿನ ಸೊಪ್ಪು ಹಾಕಿ ಹದವಾಗಿ ಬಾಡಿಸಿದಳು
ಮೈಮನವೆಲ್ಲಾ ಕಂಪೋ ಕಂಪು,
ಮನೆತುಂಬ ಸುವಾಸನೆಯ ಇಂಪು
ಉಗುರುಬೆಚ್ಚನೆಯ ಮುದ್ದೆಗೆ, ಒಗ್ಗರಣಿಸಿದ ಸೊಪ್ಪಿಟ್ಟು ಕೊಟ್ಟಳು

ಅಂಬೇಡ್ಕರ್ ಒಂದೇ ಗುಕ್ಕಿಗೆ ಸರಸರನೇ
ಧಮ್ಮಪದವ ಓದಿ ಮುಗಿಸಿದ ಹಾಗೆ
ಈ ಅಮ್ಮನ ಮುದ್ದೆ, ನೆಗ್ಗಿನ ಮುಳ್ಳಿನ ಸೊಪ್ಪಿನ ಹಿತವಾದ ಅಡಿಗೆಯನ್ನುಂಡ

ಅಮ್ಮಾ ನಾನಿನ್ನು ಬರಲೇ ಎಂದ
ತುಂಬಿದ ತಂಬಿಗೆ ನೀರು ತುಟಿಗಿಟ್ಟು ಕುಡಿಸಿದಳು,
ತಣ್ಣಗಿರಲಿ ನಿನ್ನ ಹೊಟ್ಟೆ
ಹೋಗಿ ಬಾಪ್ಪಾ ಎಂದು ಹರಸಿದಳು

ಮತ್ತೆ ಮಧ್ಯಾಹ್ನಕೆ ಕುದಿನೀರು ಹೆಸರನ್ನಿಟ್ಟಳು
ಬಿಸಿ ರೊಟ್ಟಿಗೆ ಹಿಟ್ಟು ಹದ ಮಾಡಿದಳು
ಮತ್ತದೇ ಜೋಡಿನ ಚಿಂತೆ…?
ಅಂಬೇಡ್ಕರ ಮಗ ಬಂದಾನೋ, ಮತ್ತೊಂದು
ಜೋಡು ತಂದನೋ ಎಂಬ ಕನವರಿಕೆ

ಹೀಗೆ ಹಗಲು ರಾತ್ರಿಯನ್ನು ಒಂದು ಮಾಡುತ್ತಿರುವ
ಆ ಮಗನಿಗಾಗಿ ಈ ಅಮ್ಮ ಇನ್ನೂ ಬದುಕಿರುವಳು
ಶತಮಾನಗಳ ಕಾಲವೂ ಮಣ್ಣ ಜೋಗುಳ
ಪಾಡುತ್ತಾ…


– ಡಾ.ನಿಂಗಪ್ಪ ಮುದೇನೂರು, ಧಾರವಾಡ
*****