ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ
ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು ಎಂದು ವಿಶ್ವಕ್ಕೆ ಸಾರಿದರು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಹಾಗೆ ಜೀವನಪೂರ್ತಿ ನುಡಿದಂತೆ ನಡೆದರು ಯುಗ ಪುರುಷರು. ಈಗ ಹೇಳುವ ವಿಚಾರ ರಾಜಕಾರಣಿಗಳದ್ದು! ಎಲ್ಲರೂ ನುಡಿಯುವರು… ಅದರಂತೆ ನಡೆಯದೇ ತಮಗೆ, ತಮ್ಮವರಿಗಾಗಿ ಹಗಲು – ರಾತ್ರಿ ದುಡಿಯುವ ಅತೀ ಜಾಣ ಪುರುಷರು.
ಮತ್ತೆ ಮರಳಿ ಬರುತಲಿದೆ ಚುನಾವಣೆ, ನಾಯಕರ ಹಣಾಹಣಿ…ಇದು ಯಾರಿಗೂ ಗೊತ್ತು. ಹೊಸ ಹುರುಪಿನೊಂದಿಗೆ ಹೊಸ ಮುಖಗಳೊಂದಿಗೆ ಹೊಚ್ಚ ಹೊಸ – ಹೊಸ ಭರವಸೆಗಳನ್ನು ಮೂಡಿಸುತ್ತ, ಜನರ ಮೂಗಿಗೆ ತುಪ್ಪ ಸವರುವ ಕಾಯಕ ಎಲ್ಲ ಪಕ್ಷಗಳಲ್ಲಿ ಸಾಂಗೋಪಸಾಂಗವಾಗಿ ಭರವಸೆಗಳ ಹುಸಿ ಬೀಜಗಳನ್ನು ಬಿತ್ತುವುದರತ್ತ, ಓಟು ಪಡೆಯಲು ಸಾಹಸ ನಡೆಯುತ್ತಲಿದೆ. ಎಲ್ಲ ಪಕ್ಷಗಳಲ್ಲೂ ಉದ್ದುದ್ದ ಪ್ರಣಾಳಿಕೆಗಳ ಘೋಷಣೆ ಕೂಗುವರು ಹತ್ತಾರು ಬಾರಿ ; ನಂತರದ ದಿನಗಳಲ್ಲಿ ಯಾವುದೂ ಆಗುವುದಿಲ್ಲ ಜಾರಿ. ಮತ್ತದೇ ನವ ವರಸೆಗಳಲ್ಲಿ ಪ್ರಣಾಳಿಕೆಗಳು ಜನರ ಮುಂದೆ ಪ್ರತ್ಯಕ್ಷವಾಗಲಿವೆ. ಮತ್ತೆ – ಮತ್ತೆ ಮೇಕೆಯ ಬಾಯಿಗೆ ಮೊಸರೊರೆಸುವ ಕಾಯಕ ಶುರುವಾಗಿದೆ.
ಯುವಕರನ್ನು ಸೆಳೆಯುವ ಹೊಸ ರೀತಿಯ ತಂತ್ರಗಳು, ಜಾತಿಯ ಲೆಕ್ಕಾಚಾರದ ತಂತ್ರ ಮತ್ತು ಮಹಿಳೆಯರನ್ನು ಆಕರ್ಷಣೀಯವಾಗಿ ಸೆಳೆಯುವಲ್ಲಿ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಮಹಿಳೆಯರಿಗಾಗಿಯೇ ಸೀರೆ, ಕುಪ್ಪಸ, ಕುಕ್ಕರ್, ಟಿವಿ, ಬೆಳ್ಳಿ, ಬಂಗಾರ ಇತ್ಯಾದಿ… ಇತ್ಯಾದಿ. ಇಂತಹ ಆಮಿಷ ಒಡ್ಡುವುದು ಹೊಸತೇನಲ್ಲ. ರಾಜಕಾರಣಿಗಳಿಂದ ಹಣ ಪಡೆಯುವುದು ! ಪ್ರಭು ಮಹಾಶಯರು ಓಟು ಹಾಕುವುದು ಒಂದು ರೀತಿ ಬುಕ್ಕಿಂಗ್ ಲೆಕ್ಕದಲ್ಲಿ ನಡೆಯುತ್ತದೆ. ಕಂತೆ – ಕಂತೆ ಹಣದ ಕಟ್ಟು ಮತಭಾಂದವರನ್ನು ತಲುಪಲು ಎಲ್ಲೆಲ್ಲಿಂದ ಸಾಗಿ ಕಳ್ಳ ದಾರಿಯಲ್ಲಿ ಬರುತ್ತಲಿವೆ. ಜನ ಸಾಮಾನ್ಯರು ಹಣವಷ್ಟೇ ಮುಖ್ಯವೆಂದು ಹಣ ಪಡೆದು ಓಟು ಹಾಕಿದರೆ, ನಾಯಕರು ಹಣ ನೀರಿನಂತೆ ಚೆಲ್ಲಿ!! ಓಟು ಪಡೆದು ಜನರ ಕೈಗಳಿಗೆ ಸಿಗದಂತೆ ನುಣುಚಿಕೊಳ್ಳುತ್ತಾರೆ. ಈಗಿನ ಚುನಾವಣೆ ವ್ಯವಹಾರ ಆಗಿದೆ. ಎಲೆಕ್ಷನ್ ಟೈಮಲ್ಲಿ ಊರಿಗೆ ಊರೇ ಸದ್ದು – ಗದ್ದಲ ; ನಂತರದಲ್ಲಿ ಗೆದ್ದವರ ಸದ್ದೇ ಇಲ್ಲ! ಅನ್ನುವ ಹಾಗೆ ಹಣ ಚೆಲ್ಲಿ ಗದ್ದುಗೆ ಏರುತ್ತಾರೆ. ಕಳೆದುಕೊಂಡ ದುಡ್ಡನ್ನು ಹತ್ತು ಪಟ್ಟು ಹೆಚ್ಚಿಸುವಲ್ಲಿ ಬಿಜಿಯಾಗುತ್ತಾರೆ. ಸಾಮಾಜಿಕ ಕಾರ್ಯಗಳು, ಚುನಾವಣೆಗು ಮುನ್ನ ಹರಿಯಬಿಟ್ಟ ಪ್ರಣಾಳಿಕೆಗಳು ಕರಪತ್ರದಲ್ಲಿ ಬೆಚ್ಚನೆ ಮಲಗಿ ಬಿಡುತ್ತವೆ.
ಚುನಾವಣೆಗೂ ಮುನ್ನ
ಹೊಸ – ಹೊಸ
ಯೋಜನೆಗಳ ಪ್ರಣಾಳಿಕೆ ;
ಗೆದ್ದ ನಂತರ
ಬರೀ ಆಕಳಿಕೆ
ತೂಕಡಿಕೆ
ಹೀಗಾಗದಂತೆ ತಡೆಗಟ್ಟಲು ನಮಗೆಲ್ಲ ಸುಸಮಯ ಬಂದಿದೆ. ಸಮಾಜ ಸುಧಾರಣೆಗೆ ಪ್ರತಿ ಪ್ರಜೆಗಳು ಮುಂದಾಗಬೇಕು. ಇದು ಪ್ರಜಾಪ್ರಭುತ್ವ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸಬೇಕು. ನ್ಯಾಯ ದೇವತೆ ವಿಜೃಂಭಿಸಬೇಕು. ನ್ಯಾಯ – ನೀತಿ – ಧರ್ಮದ ಪಾಲನೆ ಎಲ್ಲರೂ ಸ್ವ ಇಚ್ಛೆಯಿಂದ ಪಾಲಿಸಬೇಕು. ಆಗ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಯಾವ ಸಂದೇಹವಿಲ್ಲ. ರಾಮರಾಜ್ಯದಲ್ಲಿ ರಾವಣರಿಗೆ ಪ್ರವೇಶ ನೀಡಬಾರದು.
ಗಾಂಧಿಯವರು ನಡೆಸಿದರು ನ್ಯಾಯ, ನೀತಿ, ಸತ್ಯಕ್ಕಾಗಿ ಚಳವಳಿ… ರಾಜಕಾರಣಿಗಳದ್ದು ನ್ಯಾಯ ನೀತಿ ಬದಿಗಿಟ್ಟು ಕೋಟಿ – ಕೋಟಿ ಕಬಳಿಸುವ ಚಾಳಿ! ಇಂತಹ ಜನನಾಯಕರಿಗೆ ನಾವುಗಳೇ ಬೆಂಬಲ ಕೊಟ್ಟರೆ ಮುಂದಿನ ಪೀಳಿಗೆಗೆ ಯಾರು ಮಾದರಿ !? ರಾಜಕೀಯದಲ್ಲಿ ಎರಡು ದಾರಿಗಳು ಒಂದು ನ್ಯಾಯ ಮಾರ್ಗ, ಇನ್ನೊಂದು ವಾಮ ಮಾರ್ಗ ನ್ಯಾಯ ಮಾರ್ಗದಲ್ಲಿ ನಡೆಯುವ, ನಂಬಿಕೆಗೆ ಅರ್ಹತೆ ಇದ್ದವರನ್ನು ಗೆಲ್ಲಿಸೋಣ…ಬೆಂಬಲ ಕೊಡೋಣ ಏನಂತೀರಾ ? ಮತ್ತದೇ ಹಳೆ ರಾಗ ಹಳೆ ಹಾಡು ಅಂತಾಗದೇ ಸಮಾಜದ ಸುಭಿಕ್ಷೆಗಾಗಿ ಎಲ್ಲರೂ ಪಣತೊಡೋಣ.
-ಶೋಭಾ ಮಲ್ಕಿ ಒಡೆಯರ್, ಸಾಹಿತಿ,
ಹೂವಿನ ಹಡಗಲಿ