ಅನುದಿನ ಕವನ-೮೩೬, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ:ಗಜಲ್

ಗಜಲ್

ನಗುವಿನ ಅಲೆಯಲ್ಲಿ ತೇಲಿಸುತ
ಭವಸಾಗರವ ದಾಟಿಸಿದೆಯಾ ನೀನು
ಮುತ್ತಿನ ಮತ್ತಲ್ಲಿ ಮುಳುಗಿಸುತ
ರಸಸಾಗರವ ಸುರಿಸಿದೆಯಾ ನೀನು

ಒನಪಿನ ವೈಯಾರದಲಿ ಮೆರೆಯುತ
ಪ್ರೇಮದ ಅರಮನೆಯಲ್ಲಿ ವಿಹರಿಸುತ್ತಿರುವೆನಲ್ಲ
ಸಕಲೈಸಿರಿಯ ಮಡಿಲಿಗೆ ಸುರಿದು
ಸುಖಸಾಗರದಿ ಮುಳುಗಿಸಿದೆಯಾ ನೀನು

ಬರಡು ಭೂಮಿಯನು ಹದಗೊಳಿಸಿ
ಒಲವ ಚಿಗುರನು ಹೊರಳಿಸಿ
ಫಲಪುಷ್ಪಗಳ ಸಂಗ್ರಹಿಸಿ ಸಂಭ್ರಮದಿ
ಪ್ರೇಮಸಾಗರವ ಹರಿಸಿದೆಯಾ ನೀನು

ಒಳ್ಳೆದಿನ ಘಳಿಗೆಯನು ಸೇರಿಸಿ
ಜೀವನದಿ ಜೊತೆಯಾಗಲು ಕಾತರಿಸಿ
ಸಪ್ತಪದಿ ತುಳಿಯಲು ಅವಸರಿಸಿ
ಜನಸಾಗರವ ಸೇರಿಸಿದೆಯಾ ನೀನು

ಸರಿಯುತಿಹ ಸಮಯವ ನಿಲ್ಲಿಸಿ
ಚಂದ್ರಲೋಕಕೆ ರತುನಳಾ ಕರೆಸಿ
ಕಂಗಳಲಿ ಹೊಸಭಾವ ಮೂಡಿಸಿ
ಜೀವನಸಾಗರವ ಸಾಗಿಸಿದೆಯಾ ನೀನು

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****