ಕೊಳಲ ನಾದದ ಕನಸ ಗುಂಗಲ್ಲಿ
ಕನಸುಗಳು ಕಾಣೆಯಾಗಿವೆ
ಅವನಿರದ ವಿರಹ ದುರಿಯಲ್ಲಿ
ಗೋಪಾಲನಿರದ
ಯಮುನೆಯ ದಂಡೆ
ಕೊಳಲು ಒಂಟಿ ಅನಾಥ
ಬೇಸರದ ದನಿಯಲಿ ಅನಾಹತ ನಾದ
ಎಷ್ಟೊಂದು ಸಲ ಬಯಸಿದ್ದೆ
ಕೊಳದನಿಗೆ ನಾ ಜೊತೆಯಾಗಿ
ಕುಣಿಯಬೇಕೆಂದು
ಅವನೋ ಕೊಳದನಿಯನು
ಹರಸುತ್ತ ಓಡುವ ದಿಗಂಬರ
ಹದಿನಾರು ಸಾವಿರದಲಿ
ಯಾರೋ ಒಬ್ಬರು
ನಾನು ಮತ್ತೆ ಅನಾಥ
ದಂಡೆಯಲಿ ಒಂಟಿ ಅಳಲ
ನೋಡುತ್ತ ಕುಳಿತ ರಾಧೆ
ಗೋವಳರು ಎತ್ತ ಹೋದರೋ
ಅವರು ಗೋವುಗಳ ಚಿಂತೆಯಲಿ
ಅವರು ವ್ಯಸ್ತ ರು
ಅದೆಷ್ಟು ಹೊಸ ಕನಸುಗಳ ತುಂಬಿದ್ದ
ಮೊದಲ ಸಲ ಅವನ ಕೊಳಲಿನ
ನಾದದ ಜೊತೆಗೆ ನಾ ಕುಣಿಯುವಾಗ
ಎಲ್ಲವೂ ಚಂದ ಹೊಸತರಲ್ಲಿ
ಹಳತಾಗುವ ಕಷ್ಟ ಯಾರಿಗೆ ಬಿಟ್ಟಿದೆ ಬಿಡಿ
ಶ್ಯಾಮನೋ ರಾಧಾ ಶ್ಯಾಮನೆಂಬ
ಹೆಸರು ಪಡೆಯುವ ಹುಕಿಗೆ
ತೃಪ್ತಿ ಪಡೆಯುವ ಹುಕಿಗೆ ಬಿದ್ದವ
ರಾಧೆಯಾದರೂ ಅಷ್ಟೇ ಮೀರಾ ಆದರೂ ಅಷ್ಟೇ
ಅಲ್ಕಿದ್ದಾಗಲಷ್ಟೇ ನೆನಪು
ಹೀಗೆಯೇ ….
ನನ್ನಂತಹ ಸಾವಿರ ಸಾವಿರ ರಾಧೆಯರು
ಆ ಮೇಘಶ್ಯಾಮನ ನೆನಹಿನಲಿ
ವ್ಯಸ್ತರು,ಅವನೊ ಕೊಳನುಡಿಸುತ್ತ
ಜಗವ ಗೆಲ್ಕುತ್ತ ನಡೆವ ಸಂಚಾರಿ
ಇರಬಹುದೆ ನನ್ನಂಥವರ
ನೆನಪಿನ ಸವಾರಿ
-ಡಾ. ವೈ.ಎಂ ಯಾಕೊಳ್ಳಿ, ಸವದತ್ತಿ
*****