ಅನುದಿನ ಕವನ-೮೪೦, ಕವಿಯಿತ್ರಿ: ವಿ.ನಿಶಾಗೋಪಿನಾಥ್, ಬೆಂಗಳೂರು

ಅವನನು ಸುಮ್ಮನೆ ಪಡೆದವಳಲ್ಲ ಅವಳು
ಏಕಾಂಗಿಯಾಗಿ
ಬಿರುಬಿಸಿಲಿನ ತಾಪದಲ್ಲಿ
ಓಣಿ ಬೀದಿಗಳಲ್ಲಿ
ಹಂಸೆಯಾಗಿ ಹುಡುಕಿದಳು
ನಂಬಿಕೆ ಎಂಬ ಕುದುರೆ ಏರಿ
ಆಸೆಗಳ ಮೂಟೆ ಹೊತ್ತು
ಅವನನ್ನು ಪಡೆಯಲೇಬೇಕೆಂದು
ರಹದಾರಿ ಸವೆಸಿದಳು

ಗೊತ್ತೇ!
ಅವನ ಕಣಕಣದಲಿ ಬೆಸುಗೆಗೊಳ್ಳಲು
ಅವನ ಉಸಿರಲಿ ಉಸಿರ ಬೆರೆಸಲು
ಬಿರುಗಾಳಿಯನ್ನು ತಣ್ಣಗೆ ಹಿಡಿದು ತಂದಿದ್ದಳು

ಒಬ್ಬಂಟಿಯಾಗಿ ದೀಪಾರಾಧನೆ ಇಳಿದಳು
ಅವನ ನೆನಪಲ್ಲಿ ಹೊಸೆದ ಬತ್ತಿಯ ಹಣತೆ ಹಚ್ಚಲು
ನಗುವನ್ನೇ ಮರೆತಳು
ನೆನಪುಗಳನು ಚೂ‌ರಿಯಾಗಿ ಧರಿಸಿದಳು

‘ಕಳೆದುಕೊಳ್ಳಲಾರೆ ಈ ಅವಕಾಶವನ್ನು
ದಯಪಾಲಿಸು’
ಎಂದು ದೇವರಲ್ಲಿ ಮೊಣಕಾಲೂರಿ ಕೇಳಿದಳು.
ಮನಸ್ಸಿನಲ್ಲಿಯೇ ಪಣತೊಟ್ಟಳು:
ಉಸಿರಾಡುವ ಈ ಕ್ಷಣ ಮಾತ್ರವಲ್ಲ
ಇಡೀ ಬದುಕೇ ಅವನಿಗೆ ಮುಡಿಪು
ಪ್ರೇಯಸಿಯಾಗಿ
ಎದೆಗಪ್ಪಿ ಪ್ರೀತಿಯ ಕಾವು ನೀಡಿ
ಆನಂದದ ಹಾಲು ಉಣಿಸಿ
ಅವನಿಗೆ ಬಾಳು ನೀಡಿ
ಒಂದಾಗುವೆ ಮಿಲನದಲ್ಲಿ

ಮಿರುಗುತ್ತಿದೆ
ಅವಳ ಹಣೆ ಮೇಲೆ ಅವನಿಟ್ಟ ಮುತ್ತು
ಕೆಂಪು ಸೂರ್ಯನಂತೆ
ಅವನು ಮೂಡಿಸಿದ ಹೂವು
ಮುಡಿಗೇರಿವೆ ನಕ್ಷತ್ರಗಳಂತೆ

-ವಿ.ನಿಶಾಗೋಪಿನಾಥ್, ಬೆಂಗಳೂರು
*****