ಬಳ್ಳಾರಿ, ಏ.24: ಸಮೀಪದ ಶ್ರೀಧರಗಡ್ಡೆ ಗ್ರಾಮದಲ್ಲಿ ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಶ್ರೀ ಬಸವಣ್ಣ ಅವರ ಜಯಂತಿಯನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಗ್ರಾಮದ ಸಕಲ ಸದ್ಭಕ್ತ ಮಂಡಳಿ ಸಹಯೋಗದಲ್ಲಿ ಸಂಜೆ ಶ್ರೀ ಬಸವೇಶ್ವರ ನಗರದಿಂದ ಆರಂಭಗೊಂಡ ಮೆರವಣಿಗೆ ಶ್ರೀ ಶರಣ ಬಸವೇಶ್ವರ ಪುರಾಣ ಮಂಟಪಕ್ಕೆ ಬಂದು ತಲುಪಿತು.
ಮೆರವಣಿಗೆಯಲ್ಲಿ ಶ್ರೀ ಬಸವೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಶ್ರೀ ಬಸವೇಶ್ವರ ಯುವ ಕಲಾ ಸಂಘ ಮತ್ತು ಶ್ರೀ ಕುಮಾರೇಶ್ವರ ಕಲಾ ಸಂಘದ ಬಳಗದಿಂದ ಕೋಲಾಟ, ನಂದಿಕೋಲು ಪ್ರದರ್ಶನ ಆಕರ್ಷಕವಾಗಿತ್ತು. 20 ಕ್ಕೂ ಹೆಚ್ಚು ಜೋಡಿ ಎತ್ತುಗಳ ಮೆರವಣಿಗೆ ಗಮನ ಸೆಳೆಯಿತು.
ಪುರಾಣ ಮಹಾ ಮಂಗಲೋತ್ಸವ: ಬಳಿಕ ಜರುಗಿದ 26 ನೇ ವರ್ಷದ ಕಲಬುರ್ಗಿ ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಹಡಗಲಿ- ನಿಡಗುಂದಿ ಶ್ರೀ ರುದ್ರೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀಧರಗಡ್ಡೆ ಶ್ರೀ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀ ಮರಿಕೊಟ್ಟೂರು ದೇವರು ಆಶೀರ್ವಚನ ನೀಡಿದರು.
ಗ್ರಾಮದ ಶರಣ ಬಸವ ಗವಾಯಿಗಳಿಂದ ಪುರಾಣ ಪ್ರವಚನ ನಡೆಯಿತು. ಉಮಳಿ ಹೊಸೂರಿನ ಮಲ್ಲಿಕಾರ್ಜುನ ಅವರು ತಬಲ ಸಾಥ್ ನಿಡಿದರು.
ಸಾಧಕರಿಗೆ ಸನ್ಮಾನ: ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಸೇರಿದಂತೆ ಹಲವು ಗಣ್ಯರನ್ನು ಉಭಯ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ: ಗ್ರಾಮದ ಯುವ ಪ್ರತಿಭೆಗಳಾದ ಕು.ರೇಣುಕ ಯಾಟಿ ಮತ್ತಿತರರು ಭರತ ನಾಟ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಸದ್ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಬಿ. ನಾಗೇಂದ್ರಪ್ಪ ಮುಖಂಡರಾದ ಮಲ್ಲಿಕಾಜು೯ನ, ಕೆ. ದೊಡ್ಡಬಸಪ್ಪ. ಎಲ್. ಕೊಟ್ರಪ್ಪ. ಎ. ಜಂಭಣ್ಣ, ಬಿ. ಬಸವರಾಜ, ದೊಡ್ಡ ಬಸಪ್ಪ ಯಾಟಿ, ರವಿನಬಸಣ್ಣ, ಎಸ್. ಕೊಟ್ರಪ್ಪ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
*****