ಮಲ್ಲಿಗೆ ಮುಡಿಯದ ಮುಡಿ
ಇಳಿ ಸಂಜೆಯ ಸೂರ್ಯಸ್ತದ
ಬಿಂದಿಗೆಯನ್ನು ಹಣೆಯ ಮೇಲಿಟ್ಟುಕೊಂಡವಳು
ಮಿನುಗುವ ನಕ್ಷತ್ರಗಳ ಹಿಡಿದು
ತಲೆತುಂಬ ಮುಡಿದವಳು
ಹುಣ್ಣಿಮೆಯ ಚಂದಿರನ ಬೆಳಕ
ಕಣ್ಣಿನಲ್ಲಿಡಿದು ಬೆಳಕು ಚೆಲ್ಲಿದವಳು
ಸಂಸಾರದ ಪಯಣಕ್ಕೆ ಜೊತೆಯಾದವಳು.
ಕುಂಕುಮ, ಸಿಂಗಾರವಿಡದವಳು
ಖಾಲಿ ಹಣೆಯ ಪ್ರಶ್ನಾತೀತಳು..!
ಮಲ್ಲಿಗೆಯ ಮನಸಿನವಳು
ಮುಡಿಗೆ ಮಲ್ಲಿಗೆ ಮುಡಿಯದವಳು
ಅಲಂಕಾರವಿಲ್ಲದ ವರ್ಣನೆಯವಳು.
ನಗು ಮಾಸದ ನಗೆಯವಳು
ಅಧರಗಳಿಗೆ ರಂಗು ಹಚ್ಚದವಳು
ಜೋರು ಮಾತಿಗೆ ಕಣ್ಣೀರಾಗುವವಳು
ಮೆಲು ಹಾಸ್ಯಕ್ಕೆ ಮೌನವಾಗುವವಳು
ಬದುಕಿಗೆ ಬರವಣಿಗೆಯಾದವಳು.
ಕರೆದಾಗ ಬರದವಳು
ಬಂದಾಗ ಇರದವಳು
ಮತ್ತೆ ಮತ್ತೆ ಮರುಹುಟ್ಟಿ
ಮೀಸೆಕುಡಿಗಳ ಹೆತ್ತವಳು
ಬಾಳಿನ ಪುಟದಲ್ಲಿ ಕವಿತೆಯಾದವಳು..
-ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜ ನಗರ
*****