ಅನುದಿನ ಕವನ-೮೪೬, ಕವಿ: ಅಮು ಭಾವಜೀವಿ ಮುಸ್ಟೂರು, ಕವನದ ಶೀರ್ಷಿಕೆ: ತಪ್ಪಿಗಾಗಿ….!

ತಪ್ಪಿಗಾಗಿ….!

ಜೀವಜಲ ಬತ್ತುತಿದೆ
ಎಲ್ಲೆಲ್ಲೂ ಆಹಾಕಾರವೆದ್ದಿದೆ
ಅಂದು ಉಳಿಸಿಕೊಳ್ಳದ ತಪ್ಪಿಗೆ
ಇಂದು ಭುಗಿಲೆದ್ದಿದೆ ಈ ಧಗೆ

ಆಗ ಎಷ್ಟೊಂದು ಚಂದವಿತ್ತು
ನದಿ ಹಳ್ಳ ತೊರೆ ಎಲ್ಲ ತುಂಬಿತ್ತು
ಬಿಸಿಲು ಬಿಸಿಲಾಗೇ ಇತ್ತು
ನಿಸರ್ಗವೇ ನಕ್ಕು ನಲಿದಿತ್ತು

ಕಾಡನೆಲ್ಲಾ ಕಡಿದು ಮಾನವ
ಅತಂತ್ರಗೊಳಿಸಿದ ಆ ಸಮತೋಲನವ
ಬಿಸಿಲು ಧಗೆಯಾಗಿ ಸುಡುತಿದೆ ಈಗ
ಪ್ರಕೃತಿ ಕೈಚೆಲ್ಲಿ ಕೂತಿದೆ ತಾಳದೆ ಬೇಗೆ

ಮಾನವನ ದುರಾಸೆಯಿಂದ
ಮಲಿನವಾಯ್ತು ಗಾಳಿಯ ಕಂದ
ವಿಷ ಉಗುಳಿದ ತಪ್ಪಿಗಾಗಿ
ಅನುಭವಿಸಬೇಕೀ ಬೇಗೆ ಧಗೆ

ಇದ್ದುದನೆಲ್ಲ ನಾಶ ಮಾಡಿ
ಹೊರಟ ಇರದುದರತ್ತ ಓಡಿ
ಮಾಡಿದುದ ಉಣ್ಣಲೇಬೇಕು
ಇನ್ನಾದರೂ ಎಚ್ಚೆತ್ತುಕೊಳ್ಳ ಬೇಕು

ರಕ್ಷಿಸೋಣ ಜೀವಜಲ
ಉಳಿಸಿಕೊಳ್ಳೋಣ ಸಕಲ
ಮತ್ತೆ ಮರುಕಳಿಸಲಿ ಆ ಸಮೃದ್ದಿ
ಇದರಿಂದ ಮಾನವ ಕಲಿ ನೀ ಬುದ್ದಿ


-ಅಮು ಭಾವಜೀವಿ ಮುಸ್ಟೂರು
*****