ಅನುದಿನ‌ ಕವನ-೮೪೭, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಅವನೆಂದರೆ…..!

ಅವನೆಂದರೆ…….!

ಅವನೆಂದರೆ
ಮುಂಗಾರಿಗೆ ಮುನ್ನುಡಿ ಹಾಡುವ
ಮಾರ್ಧನಿಸುವ ಮೇಘನಾದದ
ಪ್ರತಿಧ್ವನಿಯಂತೆ

ಅವನೆಂದರೆ
ಬೇಟೆಯನರಸಿ ಹೊರಟ
ಹಸಿದ ಹುಲಿಯ
ತೀಕ್ಷ್ಣ ನೋಟದಂತೆ

ಅವನೆಂದರೆ
ಸಪ್ತ ಸ್ವರಗಳ ಏರಿಳಿತಗಳಲಿ
ಶೃತಿ ರಾಗಗಳ ಮೇಳೈಸಿದ
ಸಂಗೀತದ ರಸದೌತಣದಂತೆ

ಅವನೆಂದರೆ
ಎಳೆ ಬಿಸಿಲಿಗೆ ಅರೆಬಿರಿದ
ಹೊಸ ಕುಸುಮದ
ಪರಿಮಳ ಹೀರಿದ
ಭ್ರಮರದ ಝೇಂಕಾರದಂತೆ

ಅವನೆಂದರೆ
ಕಲ್ಲೆದೆಯನು ನಡುಗಿಸುವ
ವನಸಿರಿಯ ಅರಸ
ಸಿಂಹ ಘರ್ಜನೆಯಂತೆ

ಅವನೆಂದರೆ
ಹೆತ್ತವರ ಮಮತೆ ಮರೆಸಿ
ಪ್ರೀತಿ ವಾತ್ಸಲ್ಯ ತೋರುವ
ಪ್ರೇಮ ಮೂರ್ತಿಯಂತೆ

ಅವನೆಂದರೆ
ದಯೆ ಕರುಣೆಗಳ ತೋರುತ್ತ
ನೋವು ಕಷ್ಟಗಳಿಗೆ ಸ್ಪಂದಿಸುವ
ಆಚಾರದರಸನಂತೆ

ಅವನೆಂದರೆ
ಗತ್ತು ಗಾಂಭೀರ್ಯಗಳ ನಡೆಯಲಿ
ಜನಮನ ಗೆದ್ದ
ಲೋಕನಾಯಕನಂತೆ

ಅವನೆಂದರೆ
ಶಾಂತಿ ಸಹನೆಗಳ ಸಾರಿದ
ಸುಜ್ಞಾನದವತಾರಿ
ನನ್ನೊಡೆಯ ಬುದ್ಧಪ್ರಿಯನಂತೆ

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****