ಅನುದಿನ‌ಕವನ-೮೪೯, ಕವಿ:ಸಿ ಮಂಜುನಾಥ್ ನೆಟ್ಕಲ್, ಬೆಂಗಳೂರು, ಕವನದ ಶೀರ್ಷಿಕೆ: ನಿಮಗೆ ಸಾವಿರದ ಶರಣು

ನಿಮಗೆ ಸಾವಿರದ ಶರಣು

ನನ್ನ ಕಣ್ಣಿಗೆ ಬಟ್ಟೆ ಕಟ್ಟಿ
ಕತ್ತಲಲ್ಲಿ ನನ್ನ ಹಳ್ಳಕ್ಕೆ
ದೂಡಿದವರೆ ನಿಮಗೆ ಶರಣು
ನನ್ನ ನಂಬಿಕೆಗೆ ಚೂರಿ ಹಾಕಿ
ಬೆನ್ನಿಗೆ ಇರಿದವರೆ ನಿಮಗೆ ಶರಣು
ನಾ ನಡೆವ ಹಾದಿಗೆ ಹೆಜ್ಜೆ ಹೆಜ್ಜೆಗೆ
ಮುಳ್ಳಾದವರೆ ನಿಮಗೆ ಶರಣು
ಮಾತು ಮಾತಿಗೂ ನನ್ನ ಹಂಗಿಸಿ
ಹೀಗಳೆದವರೆ ನಿಮಗೆ ಶರಣು
ಮುಂದೆ ನನ್ನ ಹೊಗಳುತ್ತಾ
ಮರೆಯಲ್ಲಿ ಹಿಂದೆ ಬೈದಾಡಿದವರೆ
ನಿಮಗೆ ಶರಣು
ನನ್ನ ದುಡಿಮೆಯ ಪಾಲನ್ನು
ನನ್ನರಿವಿಗೆ ಬಾರದಂತೆ ದಕ್ಕಿಸಿಕೊಂಡು
ಮೆರೆದವರೆ ನಿಮಗೆ ಶರಣು
ನನ್ನ ಅವಮಾನಿಸಿ ಸನ್ಮಾನಿಸಿಕೊಂಡವರೆ
ನಿಮಗೆ ಶರಣು
ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ
ನನ್ನ ಏಣಿಯಾಗಿಸಿಕೊಂಡು ಒದ್ದವರೆ
ನಿಮಗೆ ಶರಣು
ನಿಮ್ಮ ಬದುಕನ್ನು ಬೆಳಕಾಗಿಸಲು
ನನ್ನ ಬಾಳಿಗೆ ಬೆಂಕಿ ಇಟ್ಟವರೆ
ನಿಮಗೆ ಶರಣು
ನನ್ನ ದಡ್ಡತನ ಜಾಣತನ ಪೆದ್ದುತನಗಳನ್ನು
ಮೆಚ್ಚಿ ಪ್ರೀತಿ ಕೊಟ್ಟವರೆ ನಿಮಗೆ ಶರಣು
ನನ್ನ ತಪ್ಪುಗಳ ಮನ್ನಿಸಿ ಒಪ್ಪ ಓರಣವಾಗಿಸಿ
ಕೈ ಹಿಡಿದು ನಡೆಸಿದವರೆ
ನಿಮಗೆ ಶರಣು
ನಿಮ್ಮ ಅರಿವನು ಉಣಬಡಿಸಿ ನನ್ನ
ಅಂಧಕಾರವ ಕಳೆದವರೆ
ನಿಮಗೆ ಶರಣು
ನಿಮ್ಮ ಉಳಿ ಪೆಟ್ಟುಗಳಿಂದ ನನ್ನ
ವಿಕಾರಗಳಿಗೆ ಆಕಾರ ಕೊಡುತ್ತಿರುವ
ನವ ನಿರ್ಮಾಣ ಶಿಲ್ಪಿಗಳೇ
ನಿಮಗೆ ಸಾವಿರದ ಶರಣು
ಸಾವಿರ ಸಾವಿರದ ಶರಣು


-ಸಿ ಮಂಜುನಾಥ್ ನೆಟ್ಕಲ್, ಬೆಂಗಳೂರು
*****