ಅನುದಿನ ಕವನ-೮೫೧, ಕವಿ: ಗೀತೇಶ್ (ವಿ.ಆರ್. ಮುರಲೀಧರ್), ಬೆಂಗಳೂರು, ಕವನದ ಶೀರ್ಷಿಕೆ: ಮೊದಲ ಮಳೆ – ಜೀವ ಕಳೆ

ಮೊದಲ ಮಳೆ – ಜೀವ ಕಳೆ

ಬಿರು ಬಿಸಿಲಿಗೆ ಬೆಂದ ಊರು,
ಕಾದು ಬಳಲಿದ ಪ್ರತೀ ಸೂರು,
ಬಳಲಿ ನಿಂತಿಹ ಗಿಡ ಮರಗಳು.
ಸೊರಗಿ ಒಣಗಿಹ ಬೆಳೆ ಪೈರುಗಳು.

ಚೆಲುವ ಮರೆತ ಪ್ರಕೃತಿಯು,
ಕನಲಿ ಕುಳಿತ ಭೂಮಾತೆಯು,
ಮರೆತು ಹೋದ ಖುಷಿಯದು,
ಕಳೆದು ಹೋದ ಸಂಭ್ರಮವದು.

ಬಿಡದೆ ಸುರಿವ ಮಳೆಯಲಿ,
ಬಂತೆಲ್ಲ ತಿರುಗಿ ನಲಿಯುತಲಿ,
ಮನಸಿಗದು ಮುದವ ನೀಡಿಹವು,
ಬದುಕಿಗದು ನೆಮ್ಮದಿ ಕೊಟ್ಟಿಹವು.

ವರುಣ ನಿನ್ನ ಸಿಂಚನದಲಿ,
ನಲಿದು ಭುವಿ ಸಂತಸದಲಿ,
ತಂತು ಸುತ್ತೆಲ್ಲ ಜೀವದ ಕಳೆ,
ಮೌನ ಮುರಿದು ಸುರಿದ ಮಳೆ.

-✍️ ಗೀತೇಶ್(ವಿ.ಆರ್. ಮುರಲೀಧರ್), ಬೆಂಗಳೂರು       *****