ಬಳ್ಳಾರಿ, ಮೇ 2:ಆರೋಗ್ಯಕರ ಜೀವನಕ್ಕೆ ಹಿತಮಿತ ಆಹಾರ ಅತ್ಯಗತ್ಯ ಎಂದು ಪ್ರಸಿದ್ಧ ಮನೋ ವೈದ್ಯ, ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಅವರು ಹೇಳಿದರು.
ನಗರದ ವೀವಿ ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜು, ಸಂಸ್ಕೃತಿ ಪ್ರಕಾಶನ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ(ಕೆಜೆವಿಎಸ್) ಜಿಲ್ಲಾ ಘಟಕದ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಹಾರದಲ್ಲಿ ಹಣ್ಣುಗಳು, ಸೊಪ್ಪು, ತರಕಾರಿ, ಬೇಳೆಕಾಳು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಬೆಳಿಗ್ಗೆ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಉಪಹಾರ ಸೇವಿಸಬೇಕು. ಆಹಾರವನ್ನು ನಿಯಮಿತವಾಗಿ ಸರಿಯಾಗಿ ಸೇವಿಸದಿದ್ದರೆ ಹಿಮೋಗ್ಲೋಬಿನ್ ಕೊರತೆಯಾಗಿ ಅನಿಮಿಯಾ ಉಂಟಾಗ ಬಹುದು ಎಂದು ಎಚ್ಚರಿಸಿದರು.
ಖುಷಿಯಾಗಿರಲು ಸಂಗೀತ ಕೇಳಬೇಕು, ಕಲಿಯಬೇಕು, ನೃತ್ಯ ಮಾಡುವುದು ಒಳ್ಳೆಯದು ಎಂದ ಡಾ.ಸಿ ಆರ್ ಸಿ ಅವರು ಲಲಿತಕಲೆಗಳಿಗೆ ನಮಗೆ ಖುಷಿ ನೀಡುವದರ ಜತೆ ಇತರರಿಗೂ ಸಂತಸ ನೀಡುವ ಶಕ್ತಿ ಇದೆ ಎಂದರು.
ಶೇ. 80ರಷ್ಟು ಕಾಯಿಲೆ ಬರಲು ಮನಸ್ಸಿಗೆ ನೆಮ್ಮದಿ, ಸಮಾಧಾನ ಇಲ್ಲದಿರುವುದು ಕಾರಣ ಎಂದು ಹೇಳಿದರು.
ಕಾಲೇಜುಗಳಲ್ಲಿ ಉತ್ತಮ ಉಪನ್ಯಾಸಕರು ಕಲಿಸುತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ, ಪ್ರೇರಣೆ ಇರಬೇಕು. ಆಗ ಮಾತ್ರ ಪಾಠ, ಪ್ರವಚನಗಳು ಸರಿಯಾಗಿ ಅರ್ಥವಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚಿ ರಾಜಶೇಖರ ಅವರು ಮಾತನಾಡಿ ಮಾನಸಿಕ ತಜ್ಞ ಡಾ. ಸಿ ಆರ್ ಚಂದ್ರಶೇಖರ ಅವರು ನೀಡಿರುವ ಸಲಹೆಗಳನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು.
ಪ್ರಾಚಾರ್ಯ ಡಾ.ಕೆ ಎಂ ದೇವೇಂದ್ರಯ್ಯ,
ಕೆಜೆವಿಎಸ್ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಡಾ. ಸಿ ಆರ್ ಸಿ ಅವರೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ತರಬೇತಿ ಶಿಬಿರದ ವಿಷಯ ಪರಿಣಿತರು, ರಸಾಯನ ಶಾಸ್ತ್ರ ಉಪನ್ಯಾಸಕ ಕೆ. ಟಿ ಸ್ವಾಮಿ ವೇದಿಕೆಯಲ್ಲಿ ಇದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಡಾ. ಸಿ ಆರ್ ಸಿ, ಕಾರ್ಯಕ್ರಮ ಸಂಘಟಿಸಿದ ಸಿ.ಮಂಜುನಾಥ ಮತ್ತು ಡಾ. ಅಪ್ಪಗೆರೆ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ, ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಭೌತಶಾಸ್ತ್ರ ಉಪನ್ಯಾಸಕ ಡಾ.ಎಸ್. ಮಂಜುನಾಥ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ
ಎ.ಎಂ.ಪಿ ವೀರೇಶಸ್ವಾಮಿ ಅವರು ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ದೀಪಿಕಾ ವಂದಿಸಿದರು.
ಕಾಲೇಜಿನ ಭೋದಕ, ಭೋದಕೇತರ ಸಿಬ್ಬಂದಿ ಇದ್ದರು.
*****