ಜಾತಿ ಮೀರುವ ಸಾಧ್ಯತೆ
ಅವಕಾಶವನ್ನೂ ಹೊಸಕಿ
ಆ ಮೋಹದಲ್ಲಿ
ವಿಜಾತಿಯನ್ನು
ನಡೋರಾತ್ರಿಯಲಿ ಕೈ ಬಿಟ್ಟು
ಸಜಾತಿಗೆ ಒಲಿದ ಕಾಂತೆ
ಆಕೆಗೀಗ ದೇವರು ಮೈದುಂಬುತ್ತಿದೆ
ಮೈದುಂಬಿದಾಗ
ಸನಾತನ ಕೊಳಚೆ
ಆಗಲೇಬೇಕು
ಶುದ್ಧ!
ಬರಗಾಲ ನೀರಿನ ಬೇಗೆಯಲಿ
ತೊಳೆಯಲಾದರೂ
ಆಗಬೇಕು ಶುದ್ಧೀಕರಣ
ಅದಕ್ಕೀಗ ಬೇಕು ಅಂತರ್ಜಾತಿ
ಬೆಸುಗೆ
ನೆಂಟಸ್ಥನ ಅದರ
ಶುದ್ಧಿಕರಣ ಘಟಕ!
ಕಾಂತೆ ಮಂತ್ರಿಸಿ
ನೀರು ಚಿಮಿಕಿಸುತ್ತಾಳೆ!!
ಕಪಿಲ ಸಿದ್ದರಾಮ
ನಿನ್ನ ಕುಲಸ್ಥ ಕಾಂತ
ಅಲ್ಲಮನ ಗುಹೆಯೊಳಗೆ
ಗುಹಾಂತರಿಯಾಗಿದ್ದ
ಅದ ಕಂಡು
ಅಯ್ಯೋ ಪಾಪ ಜಾತಿ
ನೀ ಎಷ್ಟು ನಿಕೃಷ್ಟ
ಬದಲಾವಣೆಯ ನಿಯಮದಲ್ಲಿ
ಎಲ್ಲಾ ಉಲ್ಟಾಪಲ್ಟಾ
ಬದಲಾವಣೆ ಕಂಡ
ಗುಹೆಯೊಳಗಿನ
ವಿರಹ ಶವ ಕಾಂತ
ಮಿಸುಕಾಡಿ
ನುಡಿದಾನ
ಕಾಂತಾ….
ಅಯಸ್ಕಾಂತ
ಆಕರ್ಷಣೆ ವಿಜಾತಿ
ಭೌತವಿಜ್ಞಾನ ಸತ್ಯ
ಜೀವವಿಜ್ಞಾನದಲಿ ಮಿತ್ಯ
ಪ್ರಯೋಗ ರಂಗದಲ್ಲಿ ಎಷ್ಟೆಲ್ಲ ಉಲ್ಟಾಪಲ್ಟ
-ರಾಘವೇಂದ್ರ ಕೆ. ತೋಗರ್ಸಿ, ಬೆಂಗಳೂರು
*****