ಗಜ಼ಲ್
ಹೋದವರನ್ನೇ ನೆನೆದುಕೊಂಡು ಏಕೆ ಕೊರಗುತ್ತೀರಿ ಇನ್ನವರು ಮರಳಿ ಬರುವುದಿಲ್ಲ
ಮರೆಯಾದವರನ್ನೇ ಸ್ಮರಿಸಿಕೊಂಡು ಏಕೆ ವ್ಯಥೆ ಪಡುತ್ತೀರಿ ಇನ್ನವರು ಮರಳಿ ಬರುವುದಿಲ್ಲ
ಜೊತೆ ನಡೆಯುವ ಹೆಜ್ಜೆಗಳು ಒಂದಲ್ಲ ಒಂದು ದಿನ ಕಣ್ಮರೆಯಾಗುತ್ತವೆ
ತಿಳಿದು ತಿಳಿದು ಏಕೆ ದುಃಖ ಪಡುತ್ತೀರಿ ಇನ್ನವರು ಮರಳಿ ಬರುವುದಿಲ್ಲ
ಬದುಕಿಡೀ ನೋವು ನುಂಗಿ ನಗುವುದನ್ನೇ ಹೇಳಿ ಕೊಟ್ಟವರು ಅವರು
ಅದೆಷ್ಟು ಬೇಗ ಅದನ್ನೇ ಮರೆತು ಏಕೆ ಗೋಳಾಡುತ್ತೀರಿ ಇನ್ನವರು ಮರಳಿ ಬರುವುದಿಲ್ಲ
ನಾವಿಲ್ಲದಿರುವಾಗ ಒಬ್ಬನ ಕಣ್ಣೊಳಗಾದರೂ ಹನಿ ಕುಡಿಯೊಡೆದರೆ ಬದುಕು ಧನ್ಯ
ಅವರ ಆದರ್ಶ ಕನಸುಗಳಲ್ಲೇ ಜೀವಿಸಿ ಏಕೆ ಚಿಂತಿಸುತ್ತೀರಿ ಇನ್ನವರು ಮರಳಿ ಬರುವುದಿಲ್ಲ
ಇಂದು ಅವರು ನಾಳೆ ನಾವು ಎಂದಿಗೂ ನಿಲ್ಲದ ಪಯಣವಿದು ‘ನಾಗೇಶಿ’
ನಿಮ್ಮೊಳಗೇ ಇರುವವರ ಹಾದಿ ಏಕೆ ಕಾಯುತ್ತೀರಿ ಇನ್ನವರು ಮರಳಿ ಬರುವುದಿಲ್ಲ
-ನಾಗೇಶ್ ಜೆ. ನಾಯಕ, ಸವದತ್ತಿ
*****