ಬುದ್ದನಾಗುವೆ
(ಗಜಲ್)
ಯಾರೂ ನನ್ನವರಲ್ಲ ಎಂಬ ಸತ್ಯ ತಿಳಿದಾಗಲೇ ನೀ ಬುದ್ಧನಾಗುವೆ
ಎಲ್ಲರೂ ನನ್ನವರೇ ಎಂಬ ಸತ್ಯ ಅರಿತಾಗಲೇ ನೀ ಬುದ್ಧನಾಗುವೆ
ಲೋಕದ ದುಃಖಕೆ ಮೂಲ ಹುಡುಕಿ ಹೊರಡಬೇಕು ಬಿಡುವಿಲ್ಲದಂತೆ
ಇರುವುದೆಲ್ಲವ ತೊರೆದು ನಿತಾಂತ ನಡೆದಾಗಲೇ ನೀ ಬುದ್ಧನಾಗುವೆ
ಜಾತಿ-ಮತಗಳ ಹಂಗು ಹರಿದು ಮನುಷ್ಯತ್ವ ಅಪ್ಪಬೇಕು ಮಗುವಿನಂತೆ
ಬಡವರ ಕಂಬನಿ ಕುಡಿದು ಪ್ರತಿಬಿಂಬವಾಗಿ ನಕ್ಕಾಗಲೇ ನೀ ಬುದ್ಧನಾಗುವೆ
ಸಾಲು ಸಾಲು ಸಾವು-ನೋವುಗಳ ನುಂಗಿಕೊಳ್ಳಬೇಕು ನೀಲಕಂಠನಂತೆ
ಸಹನೆ-ಕರುಣೆಯ ಹಣತೆ ಹಚ್ಚಿ ಬೆಳಕ ತೋರಿದಾಗಲೇ ನೀ ಬುದ್ಧನಾಗುವೆ
ಎಲ್ಲರೂ ನಡೆದ ಹೆದ್ದಾರಿ ಬಿಟ್ಟು ನಿನ್ನದೇ ಕಾಲುದಾರಿ ಹುಡುಕಿ ಸಂತನಂತೆ
ಅರಿವಿನ ಅನಂತ ಪ್ರಭೆಯ ಸಂಗ ಮಾಡಿದಾಗಲೇ ನೀ ಬುದ್ಧನಾಗುವೆ
-ನಾಗೇಶ್ ಜೆ. ನಾಯಕ, ಸವದತ್ತಿ
*****