ಬಳ್ಳಾರಿ,ಮೇ 6: ಬಿಜೆಪಿಯ 2023ರ ಪ್ರಜಾ ಪ್ರಣಾಳಿಕೆ ರಾಜ್ಯವನ್ನು ನಂ. 1 ಮಾಡುವ ರೋಡ್ ಮ್ಯಾಪ್ ಆಗಿದ್ದರೆ ಕಾಂಗ್ರೆಸ್ ಪ್ರಣಾಳಿಕೆ ಕೇವಲ ತುಷ್ಟೀಕರಣದ ಸಾವಿರ ಸುಳ್ಳಿನ ಕಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದರು.
ನಗರದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಘೋಷಣಾ ಪತ್ರ ಸುಳ್ಳು ಭರವಸೆಗಳಿಂದ ಕೂಡಿದೆ. ಕರ್ನಾಟಕ ದೇಶದ ನಂ. 1 ರಾಜ್ಯವಾಗಬೇಕಾದರೆ ಭದ್ರತೆ, ಕಾನೂನು ಸುವ್ಯವಸ್ಥೆ ಅತ್ಯಂತ ಮುಖ್ಯ. ಬಿಜೆಪಿ ಯಾವುದೇ ಶಕ್ತಿ ಗಳೊಂದಿಗೆ ರಾಜಿ ಮಾಡಿಕೊಳ್ಳದೇ ರಾಜ್ಯವನ್ನು ನಂ.1 ಮಾಡುವ ಗುರಿ ಹೊಂದಿದೆ ಎಂದರು.
ಚುನಾವಣೆಗಳಲ್ಲಿ ಸುಳ್ಳು ಸಮೀಕ್ಷೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸುತ್ತಿದೆ.
ಸುಳ್ಳು ಸಮೀಕ್ಷೆಗಳಿಂದ, ಹಣಬಲದಿಂದ ಗೆಲ್ಲಲು ಯತ್ನಿಸುತ್ತಿದೆ ಎಂದು ನರೇಂದ್ರ ಮೋದಿ ಆಪಾದಿಸಿದರು.
ಸ್ವಾತಂತ್ರ್ಯದ ಬಳಿಕ ದೇಶದ ವ್ಯವಸ್ಥೆಗಳ ಜೊತೆ ರಾಜನೀತಿಯನ್ನೂ ಕಾಂಗ್ರೆಸ್ ಭ್ರಷ್ಟ ಮಾಡಿತ್ತು ಎಂದು ಆರೋಪಿಸಿದರು.
ಮನುಷ್ಯ ವಿರೋಧಿ ಆತಂಕವಾದದ ಎದುರು ತನ್ನ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಮಂಡಿಯೂರಿದೆ.
ಉಗ್ರವಾದದಿಂದ ಉದ್ಯೋಗ, ಕೃಷಿಗೆ ಹಿನ್ನಡೆಯಾಗಿದೆ.
ಆತಂಕವಾದದ ವಿರುದ್ಧ ಒಂದು ಶಬ್ದವನ್ನು ಕಾಂಗ್ರೆಸ್ ಪಕ್ಷ ಮಾತನಾಡುತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಡುಗಡೆಗೆ ಮುನ್ನವೇ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಕೇರಳ ಫೈಲ್ಸ್ ಚಲನಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷ ಮಾತನಾಡುತ್ತಿದ್ದು ನಿರ್ಧಿಷ್ಟ ಸಮುದಾಯದ ತುಷ್ಟೀಕರಣದ ರಾಜಕೀಯವನ್ನು ಮುಂದುವರೆಸಿದೆ. ಕಾಂಗ್ರೆಸ್ ಪಕ್ಷ ತನ್ನ ವೋಟ್ ಬ್ಯಾಂಕ್ ರಕ್ಷಣೆಗಾಗಿ ತುಷ್ಟೀಕರಣವನ್ನು ಮಾಡುತ್ತಲೇ ಉಗ್ರವಾದವನ್ನು ಬೆಂಬಲಿಸಿದೆ ಎಂದು ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ಆತಂಕವಾದದ ಸ್ವರೂಪವೇ ಬದಲಾಗಿದೆ. ಸ್ಮಗ್ಲಿಂಗ್, ಡ್ರಗ್ಸ್ ವ್ಯವಹಾರದಂಥ ಅಕ್ರಮಗಳು ಇಂದು ಉಗ್ರವಾದದ ಜೊತೆಗೆ ನಂಟು ಬೆಸೆದುಕೊಂಡಿವೆ ಎಂದರು.
ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ಮೋದಿ ಅವರು, “ಈ ಹಿಂದೆ, ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ತಮ್ಮ ಸರ್ಕಾರ ದೆಹಲಿಯಿಂದ 100 ಪೈಸೆಯನ್ನು ಯಾವುದಾದರೂ ಯೋಜನೆಗೆ ಕಳಿಸಿದರೆ ಅದು ಬಡವರನ್ನು ತಲುವಷ್ಟರಲ್ಲಿ 15 ಪೈಸೆಗೆ ಇಳಿಯುತ್ತದೆ ಎಂದಿದ್ದರು. ಕೇಂದ್ರ ಸರ್ಕಾರ ಯೋಜನೆಗಳಿಗೆ ಕೊಡಲಾಗುವ 100ರಷ್ಟು ಅನುದಾನದಲ್ಲಿ ಶೇ. 85ರಷ್ಟು ಹಣವನ್ನು ಜನತೆಗೆ ತಲುಪುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ 85 ಪರ್ಸೆಂಟ್ ಕಮೀಷನ್ ಪಡೆಯುತ್ತಿತ್ತು ಎಂಬುದು ಗೊತ್ತಾಗುತ್ತದೆ ಎಂದು ಪುನರುಚ್ಚಿಸಿದರು.
ಹಿಂದುಳಿದ ಎಲ್ಲಾ ವರ್ಗಗಳ ಅಭಿವೃದ್ಧಿ ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದ ಅವರು, “ಇಂದಿನ ಸಮಾವೇಶದಲ್ಲಿ ಬಂಜಾರ, ಲಂಬಾಣಿ, ವಾಲ್ಮೀಕಿ, ಎಸ್ಸಿ-ಎಸ್ಟಿ, ಒಬಿಸಿ ಸಮುದಾಯದ ಎಲ್ಲರೂ ಸೇರಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಈ ಸಮುದಾಯಗಳನ್ನು ಕಾಂಗ್ರೆಸ್ ಅಪಮಾನಿಸಿತ್ತು ಹಾಗೂ ನಿರ್ಲಕ್ಷಿಸಿತ್ತು ಎಂದು ಆರೋಪಿಸಿದರು.
ತಮ್ಮ ನೇತೃತ್ವದ ಕೇಂದ್ರ ಹಾಗೂ ರಾಜ್ಯದಲ್ಲಿರುವ ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರಗಳು, ಈ ಎಲ್ಲಾ ವರ್ಗಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿವೆ ಎಂದರು.
ಬಳ್ಳಾರಿ ನಗರದ ಸುಮಾರು ಒಂದೂವರೆ ಲಕ್ಷ ಮನೆಗಳಿಗೆ ನೀರು ಸಿಕ್ಕಿದೆ. ಬಂಜಾರ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿಗಳನ್ನು ರಚನೆ ಮಾಡಲಾಗಿದೆ. ಹಿಂದುಳಿದ ಎಲ್ಲಾ ವರ್ಗಗಳವರಿಗೆ ಮನೆ-ಜಮೀುನುಗಳ ಹಕ್ಕುಪತ್ರ ನೀಡಿದ್ದೇವೆ. ತಾಂಡಾ, ಬಸ್ತಿಗಳಿಗೆ ಗ್ರಾಮದ ದರ್ಜೆ ನೀಡಲಾಗಿದೆ. ಕಾಂಗ್ರೆಸ್ ಇವರನ್ನು ಮರೆತುಬಿಟ್ಟಿತ್ತು ಎಂದು ಪ್ರಧಾನಿ ತಿಳಿಸಿದರು.
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಅರ್ಜಿ ಸ್ವೀಕಾರವಾಗಿದೆ
ಬಳ್ಳಾರಿಯನ್ನು ಸ್ಟೀಲ್ ಸಿಟಿಯನ್ನಾಗಿ ಪರಿವರ್ತಿಸಲಾಗುವುದು ಎಂದರು.
ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಸಂಸದ ವೈ.ದೇವೆಂದ್ರಪ್ಪ, ಜಿಲ್ಲಾ ಬಿಜೆಪಿ ಮುಖಂಡ ಅನಿಲ್ ನಾಯ್ಡು ಮತ್ತಿತರರು ನರೇಂದ್ರಮೋದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸಿರುಗುಪ್ಪ , ಕಂಪ್ಲಿ, ಸಂಡೂರು ಬಿಜೆಪಿ ಅಭ್ಯರ್ಥಿಗಳು ವೇದಿಕೆಯಲ್ಲಿದ್ದರು.
ಸಮಾವೇಶದಲ್ಲಿ ಶ್ರೀ ರಾಮುಲು ಜತೆ ಆತ್ಮೀಯವಾಗಿ ಬೆರೆತ ಮೋದಿ ಅವರು ಹೆಗಲು ಮೇಲೆ ಕೈ ಹಾಕಿ ಮಾತನಾಡಿದ್ದನ್ನು ಕಂಡ ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಗೆ ಆಂಜನೇಯ ಆಶೀರ್ವಾದ ಇದೆ. ಹುಲಿಕುಂಟೆರಾಯನ ಶತಕೋಟಿ ನಮನ, ನಿನ್ನೆ ರಾತ್ರಿ
ಮಳೆ ಬಂದಿದ್ದರೂ ಉತ್ಸಾಹದಿಂದ ಸಮಾವೇಶದಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರು, ಅಭಿಮಾನಿಗಳ ಹುಮ್ಮಸ್ಸು ಫಲಿತಾಂಶವನ್ನು ತಿಳಿಸುತ್ತದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
*****