ರೋಡ್ ಶೋ ಸಂಭ್ರಮ
(ವಿಡಂಬನೆ)
ಸಾವಿರಾರು ಕೋಟಿ ಹಣ ಸುರುವಿ ದಿನವೂ ಒಂದೊಂದು ಊರಿನಲ್ಲಿ ಭರ್ಜರಿ ಸ್ಟೇಜ್ ಹಾಕಿ, ಭರ್ಜರಿ ರೋಡ್ ಶೊ ಮಾಡುವ ಎಲ್ಲಾ ಪಕ್ಷದವರನ್ನೂ ನಿತ್ಯ ನೋಡ್ತೇವೆ. ಇವರು ಪ್ರಚಾರಕ್ಕೆ ಸುರಿಯುವ ಹಣವನ್ನು ಬಡ ಬಗ್ಗರಿಗೆ ಹಂಚಿದ್ದರೆ ಎಷ್ಟೋ ಕುಟುಂಬಗಳು ಇವತ್ತು ನೆಮ್ಮದಿ ಜೀವನ ನಡೆಸುತ್ತಿದ್ದವು! ಲೆಕ್ಕಾಚಾರದ ವಿಷಯ. ದಣಿಗೆ ವಿವರಣೆ ನೀಡಿದ.
ಹೌದು ಕಣ್ಲಾ! ನಮ್ಮ ಎಲ್ಲಾ ನಾಯಕರುಗಳು ನೀತಿ ನಿಯತ್ತಿನಿಂದ ಕೆಲಸ ಮಾಡಿ, ತಾವು ಮಾಡಿದ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವ ಬದಲು ಪ್ರತೀ ಪಕ್ಷಗಳ ಹುಳುಕನ್ನು ಹುಡುಕಿ, ಕೆದಕಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಪ್ರಚಾರ ಬೇಕಾ….!?
ಅಲ್ರವಾ…! ತೆಗಳಿಕೆಗಳೇ ತಮ್ಮ ಸಾಧನೆಯ ಮೆಟ್ಟಿಲು ಅನ್ಕಬಿಟ್ಟವ್ರೆ ದಣಿ
ಅದು ದಿಟ ಕಣ್ಲಾ, ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಓಟು ಕೊಡಬೇಕೆ ವಿನಃ ! ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಬಿಸಿಲೊಳು ಬೆವರಿಳಿಸ್ತಾ ಅದ್ಧೂರಿ ರೋಡ್ ಶೊ, ರ್ಯಾಲಿ ಮಾಡಿಕೊಂಡು ತಿರುಗಾಡ್ತವೆ….!
ಹಂಗೆಯಾ ದಣಿ, ಒಬ್ಬರನ್ನೊಬ್ಬರು ತೆಗಳುವ ಭರದಲ್ಲಿ ಮಾತಿನ ವಾಕ್ ಚಾತುರ್ಯದಲ್ಲಿ ಯಾರು ಜೋರಿರ್ತಾರೆ ಅವರನ್ನೇ ಪದೆ ಪದೇ ಟಿ. ವಿ. ನಲ್ಲಿ ತೋರುಸ್ತವ್ರೆ! ಹಿಂಗಾಗಿ ಅದೂ ಒಂದು ಪ್ರಚಾರ ಅನ್ಕೊಂಡಿರ್ಬೌದು.
ಹೋಗ್ಲಿ ಬಿಡು ಕಳಾ… ಇಷ್ಟು ದಿನಾನೆ ಕಾದವ್ರೆ ಜನಗಳು, ಇನ್ನು ಒಂದು ವಾರ ಯಾಕೆ ವಾದ!?. ಆಮೇಲೆ ಗೊತ್ತಾಗತೈತಲ್ಲಾ ಯಾರು (ನಾ)ಲಾಯಕ್ ಅಂಬೋದು.
‘ಆಯ್ತು ದಣಿ, ನಂಗೂ ವಸಿ ಕೆಲಸ ಐತೆ ಬರ್ತೇನಿ’ ಎಬಡೇಶಿಯ ನಿರ್ಗಮನ.
ನಾಯಕರುಗಳೇ ನಾಲಾಯಕ್ ಗಳಾದರೆ ಪ್ರಜೆಗಳ ಗತಿಯೇನು !? ಧಣಿಯ ಸ್ವಗತದ ಅನಿಸಿಕೆ.
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ