ಮಳೆ ಬಿದ್ದ ನೆಲದ ಆರಂಭ
ಮುಂಗಾರು ಭರಣಿ ಮಳೆ ಹೆಜ್ಜೆಯೂರಿ
ಧರಣಿ ಮೈಮೇಲೆ ನೇಗಿಲ ಕುಳದ ಕಚಗುಳಿ !
ಹೆಗಲುಗೊಟ್ಟು ಆರು ಎಳಿಯೋ ಆರಂಬದೆತ್ತುಗಳು ಕೊಟ್ಟಿಗೆ ರಂಜಣಿಗೆ ಕಣ್ಗೂಟ ಕಣ್ಣಿ ಕಳೆದುಕೊಂಡಿವೆ ಟಿಲ್ಲರ್ ಟ್ರಾಕ್ಟರ್ ಎದುರು !
ಬೀಜ ಬಿತ್ತಲು
ಬೆವಸಾಯದ ಹೊಲದ ತನುವಿಗೆ
ನೇಗಿಲ ಯೋಗಿಯೂ ಅವನೆತ್ತುಗಳೂ ಹೊಲಕೆ ಕಾಲೂರಿ ನೆಲದ ಮೇಲೆ ಬರೆಯುತ್ತಿದ್ದ ಹಸಿರು ಕಾವ್ಯವೀಗ ಕಾಣುತ್ತಿಲ್ಲ !
ಭರಣಿ ಮಳೆನೀರು
ಧರಣಿ ಮೈಯೊಳಗೆ ಮದನಾಡುವ ತೆರೆಗಳಿಗೆ
ಗೋಪಾದ ಸ್ಪರ್ಶವಿರದೆ
ಯಂತ್ರರಾಕ್ಷಸನ ಚಕ್ರಪಾದದ ಕೆಳಗೆ
ಬಸುರಿಯು ಮೈಇಳಿದ ನೋವು !
ಹೊಲದ ಕೆಬ್ಬೆಪಟ್ಟೆಯ ಮಣ್ಣು
ತಂಬಿಟ್ಟಿನ ಉಡಿಯಂತೆ ಅರಳುತ್ತಿಲ್ಲ ಈಗ
ರಾಸಾಯನಿಕ ವಿಷ ಕೃಷಿಯ ನೆಲದ ಪಾಡು
ಮೂಗುತ್ತದ ಗೆದ್ದಲಹುಳದ ಬಾಯಲ್ಲಿದೆ ಯೂರಿಯಾ ಕಾಳು !
ಹೊಸ ಹೊಸ ಕಂಪನಿಗಳು
ಅದಿಮಾಡಿ ಉದಿಹೊಯ್ದು ವಸ್ತಿ ಮಾಡುತ್ತಿವೆ ಇಲ್ಲಿ
ಮಳೆಬಿದ್ದ ನೆಲದಲ್ಲಿ
ಹದವಾದ ಬಿರುವಿಗೆ
ಮರಗಿಡಗಳ ಕಿವಿಗಳಲ್ಲಿ
ಜೀರ್ದನಿಗುಡುವ ಸಿಕಾಡಗಳ
ಕೊರಳಿಗೂ ನೇಣುಗುಣಿಕೆ !
ಅಗೋ…!
ನೋಡಲ್ಲಿ
ಬೆಟ್ಟದ ಬುಡದಲ್ಲಿ
ನೆಲದ ಮೇಲೆಸಳಿಕ್ಕಿ
ಮಂಜು ಮೇಯ್ದು ನಗುವ ಗರಿಕೆಯ ಗೆಣ್ಣುಗೆಣ್ಣಿನ ಕಣ್ಣಿನಲ್ಲಿ
ಯಂತ್ರಗಳ ಕಳಚುವ
ಕನಸುಗಳು ಕುಡಿಯೊಡೆಯುತ್ತಿವೆ
ಹುಲ್ಲು ಬೇರು ನೆಲಕ್ಕಿಳಿದು ಎಸಳೆಲೆ ನೆತ್ತಿ ಚಿಗುರಲು ಚಕ್ರಪಾದವ ಸೀಳಿ ಚಿಮ್ಮುತ್ತಿವೆ
ನೋಡಲ್ಲಿ
ಭರಣಿ ಮಳೆ ಬಿದ್ದ ನೆಲದಲ್ಲಿ
ಜೀವಗಾಣ್ಕೆಯ ಬಿತ್ತನೆ !
ಬೀಳುಕ್ಕೆ ಸೀಳುಕ್ಕೆಯಾಗಿ
ಒಮ್ಮಾಗಿ ಸೀಳುಕ್ಕೆ ಮಾಗಿ
ಭರಣಿ ಮಳೆಬಿದ್ದ ನೆಲದೊಳಗೆ
ಮುಂಗಾರು ಆರಂಬದೆತ್ತು
ಆರಂಬಗಾರನ ಗರ್ದಿಗಮ್ಮತ್ತು !
-ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು
*****