ಇಲ್ಲಿ ಕಾಲಕಾಲಕ್ಕೆ ತಕ್ಕಂತೆ
ದಾರಿಗರಿಗೆ ಅಲ್ಲಲ್ಲೇ
ದಿಕ್ಸೂಚಿ ಕೈಮರಗಳಿಗೂ
ಸೂಚನೆ ಎಚ್ಚರಿಕೆಗಳಿಗೂ
ನಿಲ್ದಾಣ ತಂಗುದಾಣಗಳಿಗೂ
ಹಳ್ಳ ದಾಟಿಸುವ ಹಮ್ಮೀರರಿಗೂ
ಎಂದಿಗೂ ಕೊರತೆಯಿಲ್ಲ…
ಆದರೂ…
ಗುರಿ ಮತ್ತು ಮಾರ್ಗಗಳ ಆಯ್ಕೆ
ಯಾವತ್ತೂ ನಡೆಯುವವರಿಗೇ
ಬಿಟ್ಟದ್ದು….
ಮಾರ್ಗಕ್ಕೆ ಮತಿಯಿಟ್ಟು
ಗಿರಿ ಪರ್ವತಗಳ ಹತ್ತಿ
ಆಳ ಕಂದರಗಳ ಇಳಿದು
ಏಳು ಸಮುದ್ರಗಳ ಈಜಿ
ತಮ್ಮೆದೆಯ ಗೂಡಲ್ಲಿ
ಕೂತು ಟಿವ್ ಟಿವ್ ಎನ್ನುತ್ತಾ
ಮೆಲ್ಲಗೆ ನಾಭಿಯಾಳಕ್ಕಿಳಿದು
ಹೊಕ್ಕುಳದೊಳಗಿಂದ ಮರ್ಮರ
ಮೊರೆವ ಧ್ವನಿಯೊಂದಕ್ಕೆ
ಅರ್ಥವ ಹುಡುಕುತ್ತಾ
ಹುಡುಕುತ್ತಾ ನಕ್ಷತ್ರವಾದವರ
ಸಾವಿರ ಸಾವಿರ ಅಸಲೀ ಕಥೆಗಳು
ಎಂದಿನಿಂದಲೂ ಉಂಟು….
ಅಂತೆಯೇ ಇಲ್ಲಿ ಸುರರೂ
ಅಸುರರೂ ಒಟ್ಟೊಟ್ಟಿಗೇ
ಹುಟ್ಟಿದ್ದು ಯುದ್ಧಗಳನ್ನೂ
ಬದುಕಿನೊಳಗೇ ಬೆಸೆದುಕೊಂಡಿದ್ದು
ಬರೀ ನ್ಯಾಯ ಅನ್ಯಾಯಕ್ಕೆ
ಮಾತ್ರವೇ ಎಂದು ಹೇಗೆ
ನಂಬಿಸುವುದು….
ರಂಗಿನ ಬೆಳಕಿಗೆ ಬೆರಗಾಗಿ
ರೆಕ್ಕೆ ಕಳೆದುಕೊಂಡ ಪಾಪದ
ಪತಂಗಗಳ ಪರ ವಕಾಲತ್ತು
ವಹಿಸಿ ಹೇಗೆ ನ್ಯಾಯ ಕೇಳುವುದು…
ಮರೆತ ಮತ್ತು ಅರಿತ ಮಾರ್ಗವನ್ನು
ಕಾಲ-ಧರ್ಮದ ಕುತ್ತಿಗೆಗೆ
ನೇಣು ಬಿಗಿದು ಬೀದಿಗಿಳಿದ
ಅಸಲಿಯ ಮುಖವಾಡ ತೊಟ್ಟ
ನಕಲಿ ಕಥೆಗಳಿಗೆ ಗುರಿ
ಮಾರ್ಗವಾದರೂ ಯಾವುದಿರಬಹುದು…?
-ಕೆ ಪಿ ಮಹಾದೇವಿ, ಅರಸೀಕೆರೆ
*****