ಹಸಿರು ಕ್ರಾಂತಿಯ ದೀವಟಿಗೆ ಡಾ.ರಾಗಿ ಲಕ್ಷ್ಮಣಯ್ಯ
ಮೇ 15, 2023 ರಾಗಿ ಲಕ್ಷ್ಮಣಯ್ಯನವರ 102 ನೇ ಜನ್ಮದಿನ. ರಾಗಿ ತಳಿಗಳ ಸಂಶೋಧಕರಾಗಿ, ರಾಗಿಬ್ರಹ್ಮನಾಗಿ, 1951ರಿಂದ 1984 ರವರೆಗೆ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ, ಇಂಡಾಫ್ 1 ರಿಂದ 15 ರವರೆಗಿನ ರಾಗಿ ತಳಿಗಳು ಹಾಗೂ 1990 ರಿಂದ 1992 ರವರೆಗೆ ಎಲ್ -5 ನಂತಹ ರಾಗಿ ತಳಿಗಳನ್ನು ಸೃಷ್ಟಿಮಾಡಿ, ರಾಗಿಯಲ್ಲಿ ಶೇ. 250 ರಷ್ಟು ಅಧಿಕ ಇಳುವರಿ ಬರುವಂತೆ ಮಾಡಿ ಹಸಿದವರಿಗೆ ತುತ್ತಿನಭಾಗ್ಯ ಕಲ್ಪಿಸಿದವರು ಲಕ್ಷ್ಮಣಯ್ಯನವರು. ಪ್ರಥಮ ಪಿಯುಸಿಯ ಕನ್ನಡ ಪಠ್ಯದ ‘ರಾಗಿ ಮುದ್ದೆ’ ಅಧ್ಯಾಯದಲ್ಲಿ ಲಕ್ಷ್ಮಣಯ್ಯನವರ ಉಲ್ಲೇಖವಿದೆ. ತಮ್ಮ ಸಾಧನೆಗಾಗಿ ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ಬೆಂಗಳೂರು ಕೃಷಿವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಅವರು 1993ರಲ್ಲಿ ಮರಣ ಹೊಂದಿದರು. ರಾಗಿಯ ಹೊಲಗಳಲ್ಲಿ ಅವರ ತಳಿಗಳು ಸದಾ ಕಂಗೊಳಿಸುತ್ತಿವೆ. ರಾಗಿಮಹಾತ್ಮನ ಹಚ್ಚಹಸಿರ ನೆನಪಿಗಾಗಿ ಈ ಕವನ!
ಹಸಿರು ಕ್ರಾಂತಿಯ ದೀವಟಿಗೆ
ಸಸ್ಯವಿಜ್ಞಾನದ ಪೂರ್ಣಜ್ಞಾನ ಪಡೆದೆ
ಗರಿಕೆ ರಾಗಿಯಲಿ ಶೋಧ ನಡೆಸಿದೆ
ರಾಮಧಾನ್ಯದ ಧ್ಯಾನ ಮಾಡಿದೆ
ಊರೂರ ಕಣದಲಿ ರಾಗಿಯ ರಾಶಿಯಾದೆ
ಹಸಿರು ಕ್ರಾಂತಿಯ ದೀವಟಿಗೆೆಯಾದೆ
ಕಣಜದ ಉದರದಲಿ ರಾಗಿಯ ಪೇರಿಯಾದೆ
ಹಸಿದವರ ಹೊಟ್ಟೆಯ ಸದ್ದಿಲ್ಲದೆ ತಣಿಸಿದೆ
ಸಿಗದಿದ್ದವರಿಗೆ ಮಡಿಕೆಕುಡಿಕೆಯ ಸೀಕಲಾದೆ
ದುಡಿವವರ ರಟ್ಟೆಗೆ ಬಲವ ಕಟ್ಟಿದೆ
ಹಸಿರು ಕ್ರಾಂತಿಯ ದೀವಟಿಗೆಯಾದೆ
ಕನಕನಾಗಿ ಬೆಸೆದುಕೊಂಡು ಬುದ್ದನಂತಾದೆ
ರಾಗಿಲಕ್ಷ್ಮಣಯ್ಯನವರಾಗಿ ರಾಗಿಯೊಂದಿಗೆ ಮದುವೆಯಾದೆ
ಇಪ್ಪತ್ತಮೂರು ರಾಗಿತಳಿಮಕ್ಕಳ ಹೆತ್ತು ಸಾಕಿದೆ
ರೈತರ ಹೊಲತೋಟಗಳಲಿ ತೆನೆಗಳರಳಿಸಿದೆ.
ಹಸಿರು ಕ್ರಾಂತಿಯ ದೀವಟಿಗೆಯಾದೆ
ದನಕರುಗಳಿಗೆ ರಾಗಿಹುಲ್ಲಿನ ಆಹಾರವಾದೆ
ಅವುಗಳೊಟ್ಟೆಯ ಸೂಕ್ಷ್ಮಜೀವಿಗಳಿಗೆ ಮೇವಾದೆ
ಹಾಲಿನ ಹೊಳೆ ಹರಿಯಲು ಕಾಲುವೆಯಾದೆ
ಕೃಷಿಕರ ಬೇಸಾಯದ ಬೆನ್ನೆಲುಬಿನ ಎತ್ತುಗಳಾದೆ
ಹಸಿರು ಕ್ರಾಂತಿಯ ದೀವಟಿಗೆಯಾದೆ
ಹಾಸ್ಟೆಲಿನ ಬಡವಿದ್ಯಾರ್ಥಿಗಳ ಗಂಗಳದ ಮುದ್ದೆಯಾದೆ
ಖಂಡಾಂತರಗೊಂಡ ರಾಗಿತಳಿಗಳ ಬ್ರಹ್ಮನಾದೆ
ಜೀವಸವೆಸಿ ಎಲ್ಲರಿಗೂ ವಂದಿಸಿ ಹೋಗುವಾಗ
ಒಂದಿಡಿ ರಾಗಿ ಎನ್ನೆದೆಯ ಮೇಲಿರಲಿ ಎಂದೆ
ಹಸಿರು ಕ್ರಾಂತಿಯ ದೀವಟಿಗೆಯಾದೆ
– ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು
*****