ಬಳ್ಳಾರಿ,ಮೇ 20: 2022-23 ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ನಗರದ ಜಿಲ್ಲಾ ಪಂಚಾಯತ್ನ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ಇತರೆ ಇಲಾಖೆಯ ಶಾಲೆಗಳಲ್ಲಿನ 06 ವಿದ್ಯಾರ್ಥಿಗಳನ್ನು, ಜಿಲ್ಲೆಯ ಐದು ತಾಲೂಕುಗಳಲ್ಲಿ ಅತಿ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳನ್ನು ಹಾಗೂ ಬಡತನದಲ್ಲಿಯೂ ಕಷ್ಟ ಪಟ್ಟು ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದ 12 ವಿದ್ಯಾರ್ಥಿಗಳು ಮತ್ತು ಬಾಲಮಂದಿರದ 04 ವಿದ್ಯಾರ್ಥಿಗಳನ್ನೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಫಲಿತಾಂಶ ಸುಧಾರಣೆಗೆ ಏಕರೂಪದ ವಾರ್ಷಿಕ ಕ್ರಿಯಾಯೋಜನೆ, ವರ್ಕಬುಕ್ ಸಿದ್ದತೆ, ಮಾಸಿಕ ಎರಡು ಯೂನಿಟ್ ಟೆಸ್ಟ್, ಪ್ರಶ್ನಾಕೋಠಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮ, ಶ್ರದ್ಧೆಗಳಿಂದ ನಿಗಧಿತ ಗುರಿ ತಲುಪಲು ಸಾಧ್ಯ ಎಂದು ತಿಳಿಸಿದರು.
ಮುಂದಿನ ವರ್ಷ ಫಲಿತಾಂಶ ಸುಧಾರಣೆಗೆ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಶ್ರಮಿಸಲು ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದ ಅವರು, ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶ ತರದ ಮುಖ್ಯೋಪಾಧ್ಯಾಯರಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಅವರು ಮಾತನಾಡಿ, ಜಿಲ್ಲೆಗೆ ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಗುರು ವೃಂದದವರು ಹಾಗೂ ಅಧಿಕಾರಿಗಳು, ಪೋಷಕರನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಸೂರಯ್ಯ ಬೇಗಂ, ಸತ್ಯನಾರಾಯಣ, ಆರೋಗ್ಯದಾಸ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕಿನ ನೋಡಲ್ ಅಧಿಕಾರಿಗಳು ಹಾಗೂ ಪಾಲಕರು ಹಾಜರಿದ್ದರು.
*****