ಅನುದಿನ ಕವನ-೮೭೧, ಕವಿಯಿತ್ರಿ: ಡಾ. ನಂದಿನಿ ವಿರು, ಬೆಂಗಳೂರು, ಕವನದ ಶೀರ್ಷಿಕೆ: ಮರೆತೆಯಾ ಒಲವೇ…

🌹ಮರೆತೆಯಾ ಒಲವೇ🌹

ಮರೆತೆಯಾ ಒಲವೇ
ಹಿಡಿದ ಹಸ್ತವನು
ಚಿಗುರ ಬೆರಳನು
ಬೆರಳ ಉಂಗುರವನು
ಕೊಟ್ಟ ಮಾತನ್ನೂ
ಮರೆತೆಯಾ

ಮೇಘವು ಸಂದೇಶ
ಹೊತ್ತು ತರುವುದೆಂದು
ಆಗಸಕ್ಕೆ ಮುಖವಿರಿಸಿದರೆ
ಕಂಗಳ ಹನಿಗಳೊಂದಿಗೆ
ಕಾರ್ಮುಗಿಲು ಜೊತೆಗೂಡಿದೆ
ಸಣ್ಣದೊಂದು ಸದ್ದಿಗೂ
ನಿನ್ನ ಬರುವಿಕೆಯೆಂಬ
ಚಡಪಡಿಕೆ

ಜಗದ ನೋಟವೆಲ್ಲ
ಇರಿದಿರಿದು
ಪ್ರೇಮದ ಕಗ್ಗೊಲೆಯಾಗಿದೆ
ಮತ್ತೆಂದೂ ಉದಿಸದೇನೂ
ಸುಳ್ಳು ಆಣೆ ಪ್ರಮಾಣಗಳಿಗೆ
ಗೋರಿ ಕಟ್ಟಿಕೊಂಡಿದೆ ಪ್ರೀತಿ
ಜತನದಿ ಕಾಪಿಟ್ಟಿದ್ದು
ಬೆಂಕಿಯಿಲ್ಲದೆ ಸುಡುತ್ತಿವೆ
ನೆನಪು ಕನಸುಗಳ
ಜೋಳಿಗೆ ತುಂಬಿದ್ದು

ಮರೆತು ದೂರಾದೆಯಾ ಒಲವೇ
ಅದಕೇ ನೋಡು
ಬೆಳದಿಂಗಳ ಉಪಮೆಯಲ್ಲೇ
ಜ್ವಲಿಸಿ ಕರಗಿದೆ

-ಡಾ.ನಂದಿನಿ ವಿರು, ಬೆಂಗಳೂರು
*****