ಬೆಂಗಳೂರು, ಮೇ 24: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಮಂಗಳೂರು ಶಾಸಕ ಯು.ಟಿ ಖಾದರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ನಿನ್ನೆ ನಾಮಪತ್ರ ಸಲ್ಲಿಸಿದ್ದ ಯು.ಟಿ ಖಾದರ್ ಅವರ ಹೆಸರನ್ನು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅನುಮೋದಿಸಿದರು. ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಸರ್ವಾನುಮತದಿಂದ ಆಯ್ಕೆಯಾದರು. ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಅವರು ಖಾದರ್ ಅವರ ಆಯ್ಕೆಯನ್ನು ಘೋಷಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಪೀಠದ ಬಳಿಗೆ ಯುಟಿ ಖಾದರ್ ಅವರನ್ನು ಕರೆತಂದರು.
ಬಳಿಕ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಡಿ.ಕೆ.ಶಿವಕುಮಾರ್, ಡಾ. ಜಿ.ಪರಮೇಶ್ವರ್ ಅವರು ಅಭಿನಂದನಾ ಭಾಷಣ ಮಾಡಿ, ನೂತನ ಸ್ಪೀಕರ್ ಅವರಿಗೆ ಶುಭಾಶಯ ಕೋರಿದರು.ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಚಿವರನ್ನು ಸದನಕ್ಕೆ ಪರಿಚಯ ಮಾಡಿಕೊಟ್ಟರು.
*****