ಅನುದಿನ ಕವನ-೮೭೪, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್

ನಿನ್ನ ಬಿಸಿಉಸಿರ ಪತ್ರದ ಸಾಲುಗಳಲಿ ಒಲವಿನ ಪರಿಮಳವಿದೆ
ಮುಸುಕಿದ ನಿಟ್ಟುಸಿರು ಸುಪ್ತ ಬಯಕೆಯಲಿ ಕಪಟವರಿಯದ ಹೃದಯವಿದೆ .

ಮಾಟ ಹೂಡುವ ಕಂಗಳ ಲೋಕದಲಿ ಉರಿವ ದೀಪವಿದೆ
ಪ್ರೀತಿ ಬೆಸುಗೆ ಉಕ್ಕಿಸುವ ತುಟಿಗಳಲಿ ಜೇನ ಸ್ವಾದವಿದೆ .

ಮೆತ್ತಿದ ಬಣ್ಣ ಬಿಡಿಸಿದ ಚಿತ್ರದಲಿ ಗಜಲಿನ ದುನಿಯಾವಿದೆ
ಮುತ್ತಿನ ಕರಾಮತ್ತಿನ ಒಡಲ ಹಾಡಿನಲಿ ಬದುಕ ಭಾವವಿದೆ .

ಕೊರೆವ ನೀರವ ರಾತ್ರಿಯ ವಿರಹದುರಿಯಲಿ ಬಿಕ್ಕಳಿಕೆಯ ಹೂವಿದೆ
ಖುಷಿಯ ಕದ ತೆರೆವ ಹಿತವಾದ ಮಾತುಗಳಲಿ ಕನಸುಗಳ ಕುಣಿತವಿದೆ .

ತೂಗುಮಂಚಕೆ ತಲೆಯಾನಿಸಿದ ತಾರೆಗಣ್ಣ ನೋಟದಲಿ ಮಾದಕ ಸೆಳೆತವಿದೆ
‘ ದಿನ್ನಿ’ ಮಿಥುನ ಇರುಳ ಎದೆಯ ತುಡಿತದಲಿ ಸುಖದ ಗೆಲುವಿದೆ .


⚘-ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
*****