ಬಳ್ಳಾರಿ,ಮೇ 24: ಕ್ಷಯರೋಗಿಯು ಚಿಕಿತ್ಸೆ ಪಡೆಯದೆ ಇತರರ ಬಳಿ ಕೆಮ್ಮಿದಾಗ ಅಥವಾ ಸೀನಿದಾಗ ಹತ್ತಿರವಿರುವವರಿಗೆ ರೋಗ ಹರಡುವ ಸಾಧ್ಯತೆ ಇದ್ದು, ಸೂಕ್ತ ಮುಂಜಾಗೃತೆ ವಹಿಸಿ ರೋಗ ನಿಯಂತ್ರಣಕ್ಕೆ ಕೈಜೊಡಿಸಿ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ತಿಳಿಸಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ಬೆಂಗಳೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ ಎಸ್‍ಎಫ್‍ಟಿ ಅಡಿ ಉಚಿತ ಆರೋಗ್ಯ ತಪಾಸಣೆ, ಕ್ಷಯ ರೋಗದ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತಪಾಸಣಾ ಶಿಬಿರ ಹಾಗೂ ಕ್ಷಯರೋಗ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಮಾತನಾಡಿದರು.
ಪ್ರಸ್ತುತ ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 22 ಜನ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಜನತೆ ಆತಂಕ ಪಡಬೇಕಾಗಿಲ್ಲ ಇದಕ್ಕೆ ಬೇಕಾದ ಚಿಕಿತ್ಸೆಯನ್ನು ಉಚಿತವಾಗಿ ನೇರ ನಿಗಾವಣೆ ಮೂಲಕ ಒದಗಿಸುವ ಮೂಲಕ ಒದಗಿಸಿ ಗುಣಪಡಿಸಲಾಗುತ್ತಿದೆ, ರೋಗಿಯು ಸಾರ್ವಜನಿಕರ ಸ್ಥಳದಲ್ಲಿ, ಮನೆಯಲ್ಲಿ ಅಥವಾ ಇತರರ ಬಳಿ ಮಾತನಾಡುವ ವೇಳೆ ಕೆಮ್ಮು, ಅಥವಾ ಶೀನು ಬಂದಲ್ಲಿ ಶುದ್ಧವಾದ ಬಟ್ಟೆಯನ್ನು ಬಾಯಿಗೆ ಅಡ್ಡಲಾಗಿ ಬಳಸಿ ಎಂದು ಸಲಹೆ ನೀಡಿ, ಪ್ರಶಿಕ್ಷಣಾರ್ಥಿ ಖುರ್ಶಿದ್ ಬೇಗಂ ಸಿರಿಗೇರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಇಲ್ಲಿನ ಜನರ ಬಳಿ ತೆರಳಿ ಕ್ಷಯರೋಗದ ಮಾಹಿತಿಯೊಂದಿಗೆ ಅರಿವು ಮೂಡಿಸುವಂತಹ ಕಾರ್ಯ ಮಾಡುತ್ತಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಎಸ್.ಎಫ್.ಟಿ ಮಾರ್ಗದರ್ಶಕರಾದ ಈಶ್ವರ ದಾಸಪ್ಪನವರ ಅವರು ಮಾತನಾಡಿ, ಆರೋಗ್ಯ ಶಿಕ್ಷಣವನ್ನು ವಿವಿಧ ಬಗೆಗಳಲ್ಲಿ ಸಾರ್ವಜನಿಕರಿಗೆ ಮನಮುಟ್ಟುವಂತೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮಗಳನ್ನು ಗುಂಪುಸಭೆ, ಮನೆ ಭೇಟಿ, ಕಲಾ ತಂಡಗಳಿಂದ ವಿಡಿಯೋ ವಾಹನದ ಮೂಲಕ, ಪತ್ರಿಕೆ, ಜಾಥಾ, ಮುಂತಾದವುಗಳನ್ನು ಗ್ರಾಮ, ಹೋಬಳಿ, ತಾಲೂಕುವಾರು ಕೈಗೊಳ್ಳಲಾಗುವುದು. ಕ್ಷಯ ರೋಗದ ಲಕ್ಷಣಗಳ ಇಳಿಕೆಗಳಲ್ಲಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯು ಸಹ ಒಂದಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ತಿಪ್ಪೇಸ್ವಾಮಿ ರೆಡ್ಡಿ, ಡಾ.ನಾಗರಾಜ ಪೂಜಾರಿ, ಎಸ್.ಎಫ್.ಟಿ. ಮೇಲ್ವಿಚಾರಕರಾದ ಡಾ. ಮಂಜುನಾಥ್.ಟಿ.ಎ, ಪಂಚಾಯತ ಅಭಿವೃದ್ದಿ ಅಧಿಕಾರಿ ಶಿವಕುಮಾರ್, ಪ್ರಮುಖರಾದ ಪೂಜಾರಿ ಸಿದ್ದಯ್ಯ, ಬಿ.ಉಮೇಶ್, ಡ್ರೈವರ್ ಹುಲುಗಪ್ಪ, ಎನ್.ಹನುಮಂತ, ಅನಿಲ್, ಪೈಲ್ವಾನ್ ಸದ್ದಾಂ, ರಾಘವೇಂದ್ರ, ಲಕ್ಷ್ಮಣ್ ಭಂಡಾರಿ, ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಿ. ಈಶ್ವರ, ಪ್ರಶಿಕ್ಷಣಾರ್ಥಿ ಖುರ್ಷಿದಾ ಬೇಗಂ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರಾದ ಮೊಹ್ಮಮದ್ ಖಾಸಿಂ, ಭೀಮರಾಜ್ ರೆಡ್ಡಿ, ಚಿದಾನಂದ, ಅನ್ನದಾನಪ್ಪ ಅಬ್ಬಿಗೇರಿ, ಹುಲುಗಪ್ಪ, ಸಿ.ಹೆಚ್.ಒ, ಪಿ.ಹೆಚ್.ಸಿ,ಹೆಚ್.ಐ.ಒ, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ತಾಯಂದಿರು, ನರೇಗಾ ಕೂಲಿ ಕಾರ್ಮಿಕರು ಭಾಗಿಯಾಗಿದ್ದರು.
ಆರೋಗ್ಯ ತಪಾಸಣೆ: ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಫ ಪರೀಕ್ಷೆ, ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕಣ್ಣಿನ ಪರೀಕ್ಷೆ ಕೈಗೊಳ್ಳಲಾಯಿತು.
——