ಅನುದಿನ ಕವನ-೮೭೫, ಕವಿ: ನಾಗತಿಹಳ್ಳಿ ರಮೇಶ, ಬೆಂಗಳೂರು, ಕವನದ ಶೀರ್ಷಿಕೆ: ಅವ್ವನ ನೆನಪು

ಅವ್ವನ ನೆನಪು

ಅವ್ವ
ನಿನ್ನ ನೆನಪು
ನಾಲಗೆಯಲಿ ಉಕ್ಕುವ ತಿಳಿ ಕಡಲು
ಈಸುತ್ತಿರುವ ಜಲಚರವಾಗಿ
ಚಿಪ್ಪೊಳು ಮುತ್ತಾಯ್ತು.

ನಿನ್ನ ಮೇಲೆ ಬರೆ ಎಳೆದ
ಅಡ್ಡ ಗೆರೆಯ ಸಾಲು;
ಆಕಾಶಕ್ಕೇ ಬರೆ ಇಟ್ಟಂತೆ ಸುಳಿ ಮಿಂಚು
ಕಣ್ಣಿನಾಳದಿಂದ ಉಕ್ಕುಕ್ಕಿ
ಬಂದೇ ಬರುವುದು ಮಳೆ.
ಬರಗಾಲ ತೊಳೆದು
ಸುತ್ತ ಕುಣಿವ ಹಸಿರ ಕಾಡಿನ ಜಾತ್ರೆ.

ಬೀಸುವ ಗಾಳಿಗೇ
ನೊರ ನೊರ ನುಚ್ಚು ನೂರಾದ ಕೋಟೆಗಳು
ತುಂತುರು ಸೋನೆ
ಆ ಮಳೆ ಈ ಮಣ್ಣ ಕೂಡಿದ
ಘಮಲು ಹೊತ್ತ ಟಪಾಲು ಬಂತು
ಧೋ ಧೋ ಒಲವ ಸುಗ್ಗಿಯ ಸಿರಿ…

ನೆಲವೀಗ ಹಡಗು
ಈಸುವ ಮರಿ ಮೀನು ನಾನು
ಕಡಲು ಮಳೆ ತಾಯಿ ನೀನು

ಓ ನನ್ನ ತಾಯೇ ,
ನಿನ್ನ ಮಾಸದ ಮುಗುಳು ನಗೆ
ನನ್ನ ತನು ಮನ ಕಾಯಕದ ಮಿಂಚು…!

-ನಾಗತಿಹಳ್ಳಿ ರಮೇಶ, ಬೆಂಗಳೂರು
*****