ಅನುದಿನ ಕವನ-೮೭೯, ಕವಿಯಿತ್ರಿ: ಕೆ. ಪಿ. ಮಹಾದೇವಿ. ಅರಸೀಕೆರೆ

ತುಂಬಿದ ಹಡಗೊಂದು
ಮುಳುಗುವಾಗ….
ಮುಗಿಲ ಚುಂಬಿಸುವಂತ
ಅದರೆತ್ತರ,
ಸಾಗರವೇ ತನ್ನೊಳಗೆ
ಇರುವಂತಾ ವಿಸ್ತಾರ
ಪರ್ವತವೇ ತೇಲಿತೆಂಬಂತಾ
ತೂಕ
ನಿಂತಂತೆ ಗಂಭೀರಘನತೆಯಲಿ
ರಾಜ
ಯಾವುದೂ ಗಣನೆಗೆ
ಬರುವುದೇ ಇಲ್ಲ
ಕಾಲ ಸನ್ನಿಹಿತವಾಗಿ
ಅರಿವಾಗದ ಕಾರಣವು
ನಿಮಿತ್ತವಾಗುವುದು
ತುಂಬಿದ ಹಡಗೊಂದು
ಮುಳುಗುವಾಗ…

ದೇಶದಿಂದೇಶಕ್ಕೆ ಕಾಲ
ಋತುಗಳ ಮೆಟ್ಟಿ
ಸ್ಥಾವರಗಳ ಒಳಗೊಟ್ಟಿ
ಜಂಗಮದ ದಿಟ್ಟಿ ನೆಟ್ಟು
ಒಳಗೂ ಹೊರಗೂ
ಸಾವಿರ ಸುಖದುಃಖಗಳ
ಭಂಡಾರ ಹೊತ್ತು
ಸದ್ದುಗದ್ದಲ ಮೀರಿ
ದಿಕ್ಸೂಚಿಯನೇ ನೆಚ್ಚಿ
ಜಗದ ಸಾಗರದೊಳಗೆ
ತೇಲಿ ತೂಗಿ ಜೀಕಿ ಜೀಕಿ
ಗುರಿಯೆಡೆಗೆ ಗುರಿ ತಪ್ಪಿ
ಬಂದರಿಗೆ ಬರುವ
ಮೊದಲೇ
ಚುಕ್ಕಾಣಿ ಹಿಡಿದವನ
ಕೈ ಮೀರಿ
ನಿಷ್ಠೆ ನಂಬಿಕೆ ಜಾಗ್ರತೆಯೆಂಬ
ಪದಗಳೂ ಸದ್ದಿಲ್ಲದೆ
ಮುಳುಗುತ್ತವೆ
ತುಂಬಿದ ಹಡಗೊಂದು
ಮುಳುಗುವಾಗ….


-ಕೆ. ಪಿ. ಮಹಾದೇವಿ.
ಅರಸೀಕೆರೆ.
*****