ಸಾಲು ಮರದವ್ವ (ಪದ್ಮಶ್ರೀ ಸಾಲುಮರದ ತಿಮ್ಮಕ್ಕ)
ಬಯಲು ಹಾದಿಯ
ದಾರುಣ ಬಿಸಿಲಿಗೆ
ಇಕ್ಕೆಲಗಳ ಪಾತಿ ಕಟ್ಟಿ
ಬೀಜ ಬಿತ್ತಿ
ನೆರಳು ಹೆತ್ತ ಜೀವ..,
ಸಾಲು ಮರದವ್ವ
ಬಂಜೆ ಎಂದು
ಜರಿದ ಊರು
ಹಡೆದ ಮಕ್ಕಳು
ಎರಡೋ ಮೂರು
ನೂರು ನೂರು
ಮಕ್ಕಳ ತಾಯಿ
ಸಾಲು ಮರದವ್ವ..,
ಮೈಲು ದಾರಿಗೆ
ಹೆಜ್ಜೆ ಸವೆದು
ಮಡಿಕೆ ನೀರಿನ
ಹಾಲನೆರೆದು
ಎಳೆಯ ಗಿಡವ
ಪೊರೆದ ಜೀವ
ಸಾಲು ಮರದವ್ವ..,
ನಡುಪ್ರಾಯ ಮೂಡಿ
ತನ್ನೆತ್ತರ ನಿಂತ
ಹಸಿರು ಜೀವಕೆ
ಬೇಲಿಯಾಗಿ
ಪತಿಯೊಡಗೂಡಿ
ಕಣ್ಣಲಿ ಕಾದ
ಸಾಲು ಮರದವ್ವ..,
ಪತಿಯು ತೆರಳಿ
ಮುಪ್ಪು ಅಪ್ಪಿ
ತಬ್ಬಲಿ ತಾನೆಂದು
ಬಗೆಯದೆ
ಬೆಳೆದ ಮರಗಳ
ಬಿಳಿಲು ತಬ್ಬಿ
ಬೆರಗು ಮೂಡಿ
ಬೀಗಿದ ಜೀವ
ಸಾಲು ಮರದವ್ವ..,
ಹಾದಿ ತುಂಬಾ
ಹಸಿರು ಬೆಳೆದು
ಸಾಗಿದವರಿಗೆ
ತಂಪನೆರೆದ
ಮರದ ಬುಡದ
ತಾಯಿ ಬೇರು
ಸಾಲು ಮರದವ್ವ.,
-ಅಪ್ಪಗೆರೆ ಡಿ ಟಿ ಲಂಕೇಶ್
ಚನ್ನಪಟ್ಟಣ
*****