ಗ್ಯಾರಂಟಿ: ಗೊಂದಲ ನಿವಾರಿಸಿ -ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

ನಿತ್ಯವೂ ಬಗೆಹರಿಯಲಾಗದ ಗ್ಯಾರಂಟಿಗಳ ಗೊಂದಲ. ಕೆಲವು ಸಚಿವರ ಅನವಶ್ಯಕ ಗೊಂದಲದ ಹೇಳಿಕೆಗಳು ಸೋತು ಸುಣ್ಣವಾಗಿ ಮೂಲೆಗುಂಪಾಗಿರುವ ಬಿಜೆಪಿ ಮತ್ತು ಜನತಾದಳದ ನಾಯಕರು ಬಾಯಿಗೆ ಬಂದಂತೆ ಬೈಯ್ಯುವ ಮತ್ತು ಪ್ರತಿಭಟನೆಗೆ ಅವಕಾಶ ನೀಡಿರುವುದು ಏಕೆ? ಮುಖ್ಯಮಂತ್ರಿ ಆಯ್ಕೆ, ಸಚಿವರ ಪಟ್ಟಿ ಸಿದ್ಧತೆ ಮತ್ತು ಖಾತೆಗಳ ಹಂಚಿಕೆ ಹೀಗೆ ನೀವೇ ವಾರಗಟ್ಟಲೆ ಗೊಂದಲದಲ್ಲಿ ಮುಳುಗಿ ಹೇಗೋ ಚೇತರಿಸಿಕೊಂಡಿದ್ದೀರಿ.
ಈ ಎಲ್ಲದರ ನಡುವೆ ಅನವಶ್ಯಕವಾಗಿ ಮೈಮೇಲೆ ಸಮಸ್ಯೆಗಳನ್ನು ಎಳೆದುಕೊಳ್ಳುತ್ತಿರುವುದನ್ನು ನಿಲ್ಲಿಸಿ ಉತ್ತಮ ಆಡಳಿತದ ಕಡೆ ಗಮನಕೊಡಿ. ಮತದಾರರು ಕೇವಲ ನಿಮ್ಮ ಗ್ಯಾರಂಟಿಗಳನ್ನೇ ನಂಬಿಯೇ ವೋಟು ಹಾಕಿಲ್ಲ. ಬಿಜೆಪಿ ಆಡಳಿತದ ಜಾತಿ-ಧರ್ಮದ ಹೆಸರಿನಲ್ಲಿ ಹುಟ್ಟು ಹಾಕುತ್ತಿದ್ದ ಕೋಮು ದ್ವೇಷ, ಸಂವಿಧಾನದ ವಿರುದ್ಧ ವ್ಯಕ್ತಪಡಿಸುತ್ತಿದ್ದ ಅಸಹನೆ, ಅಪಸ್ವರ, ದುರಂಕಾರದ ವರ್ತನೆ, ಆಕ್ರಮಣಕಾರಿ ಹೇಳಿಕೆಗಳಿಂದ ಜನರು ಬೇಸತ್ತಿದ್ದರು. ಹಾಗಾಗಿ ನಿಮ್ಮನ್ನು ಜನರು ಅಧಿಕಾರಕ್ಕೆ ತಂದು ಬಿಜೆಪಿಯ ಅತಿರೇಕಗಳಿಗೆ ಕಡಿವಾಣ ಹಾಕಿದ್ದಾರೆ.
ಇನ್ನೂ ಆಡಳಿತ ವ್ಯವಸ್ಥೆ ಸುವ್ಯವಸ್ಥೆಗೆ ಬರುವ ಮುನ್ನವೇ ಅನವಶ್ಯಕ ಹೇಳಿಕೆಗಳಿಂದ ಬಿಜೆಪಿಗೆ ಪ್ರತಿಭಟನೆಯ ಅಸ್ತ್ರ ನೀಡಿದ್ದೀರಿ. ಇದೆಲ್ಲ ಈಗ ಬೇಕಿತ್ತೇ? ಕೋಮ ದ್ವೇಷದಿಂದ ಒಳಗೊಳಗೇ ನಲುಗಿ ಹೋಗಿರುವ ಜನರಿಗೆ ಕರ್ನಾಟಕ ಇಡೀ ದೇಶಕ್ಕೇ ಒಂದು ಹೊಸ ದಿಕ್ಕನ್ನು ತೋರಿದೆ. ಕರ್ನಾಟಕದ ಪ್ರಬುದ್ಧ ಮತದಾರರ ಆಶಯವನ್ನು ನಿರಾಶೆಗೊಳಿಸಬೇಡಿ. ಹೆಚ್ಚು ಕೆಲಸ ಮಾಡುವ ಮೂಲಕ ಮಾತು ಕಡಿಮೆ ಮಾಡಿ. ಈಗಾಗಲೇ ನಿಮ್ಮ ಗ್ಯಾರಂಟಿಗಳ ಬಗೆಗೆ ಜನರಲ್ಲಿ ಇರುವ ಗೊಂದಲವನ್ನು ನಿವಾರಿಸಿ, ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತೆ ಮಾಡಿ.


-ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು
*****