ಅಂತಾರಾಷ್ಟ್ರೀಯ ಜಾನಪದ ಗಾಯಕ, ಸಾಹಿತಿ, ಸಂಗೀತಗಾರ, ಸಂಶೋಧಕ, ಹಾಡುವ ಹಕ್ಕಿ
ಡಾ. ಬಾನಂದೂರು ಕೆಂಪಯ್ಯ ಅವರು ಇಂದು(ಜೂ.14) ತಮ್ಮ 72 ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ನಾಡಿನಾದ್ಯಂತ ತಮ್ಮ ಅಪಾರ ಅಭಿಮಾನ ಬಳಗ ಹೊಂದಿರುವ ಡಾ.ಬಾನಂದೂರು ಕೆಂಪಯ್ಯ ಅವರನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡ ಅಕ್ಷರ ಗುಚ್ಚಗಳ ಮೂಲಕ ಶುಭಾಶಯ ಕೋರುತ್ತಿದೆ. 🌺🎂🌺💐👇
ಡಾ. ಬಾನಂದೂರು ಕೆಂಪಯ್ಯ ಅವರು, ರಾಮನಗರ ತಾಲೂಕಿನ ಬಾನಂದೂರಿನಲ್ಲಿ ೧೯೫೧ರ ಜೂನ್ ೧೪ರಂದು ಜಾನಪದ ಕುಟುಂಬದಲ್ಲಿ ಜನಿಸಿದರು. ಇವರ ತಾಯಿ ಹುಚ್ಚಮ್ಮ ಜನಪದ ಗಾಯಕಿ, ತಂದೆ ವೆಂಕಟಯ್ಯ ಜನಪದ ಕಲೆಗಾರರು. ಸಾಂಸ್ಕೃತಿಕ ಶ್ರೀಮಂತಿಕೆಯ ದಂಪತಿಗಳ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಕೆಂಪಯ್ಯ ಅವರೇ ಕಿರಿಯರು. ಇವರ ಅಣ್ಣ ಆರು ನಗಾರಿ ಬಾರಿಸುವ ಪರಿಣತಿ ಪಡೆದು ನಗಾರಿ ಸಿದ್ದಯ್ಯನೆಂದೇ ಪ್ರಸಿದ್ಧಿ ಹೊಂದಿದ ಪ್ರತಿಭಾವಂತರು.
ಡಾ. ಕೆಂಪಯ್ಯ ಅವರ ಪ್ರಾಥಮಿಕ ಶಿಕ್ಷಣ ಬಾನಂದೂರು, ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಜರುಗಿತು. ೧೯೮೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಸ್ನಾತಕೋತ್ತರ(ಎಂ.ಎ) ಪದವಿ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕರ್ನಾಟಕ ದಲಿತ ಜಾನಪದ ಸಂಗೀತದಲ್ಲಿ ಡಿ.ಲಿಟ್. ಪದವಿ ಪಡೆದಿದ್ದಾರೆ.
ಡಾ. ಬಾನಂದೂರು ಕೆಂಪಯ್ಯನವರು ಆರಂಭದಲ್ಲಿ ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ, ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೮೦ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇರಿದ ಬಳಿಕ ಹಿಂತಿರುಗಿ ನೋಡಲಿಲ್ಲ . ಬೆಂಗಳೂರು,ಧಾರವಾಡ, ಗುಲ್ಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಉಪ ನಿರ್ದೇಶಕರಾಗಿ, ಕಾರ್ಯಕಾರಿ ನಿರ್ಮಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದರು.
ಸಾಹಿತ್ಯ ಸೇವೆ: ಡಾ. ಕೆಂಪಯ್ಯ ಅವರು ಬಯಲು ಸೀಮೆಯ ಜಾನಪದ ಕಥೆಗಳ ಸಂಕಲನ ಹೊರ ತಂದಿದ್ದಾರೆ. ‘ಚೆಂದುಳ್ಳಿ ಪದವ ಕಲಸವ್ವ’ ಹಾಗು ‘ಮೊಗ್ಗಾಗಿ ಬಾರೊ ತುರುಬಿಗೆ’ ಎಂಬ ಹೆಸರಿನ ಜನಪದ ಗೀತೆಗಳ ಸಂಗ್ರಹ, . ‘ನನ್ನ ಈ ನೆಲದಲ್ಲಿ’ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ಕನ್ನಡ ನಾಡಿನ ನೂರಕ್ಕೂ ಹೆಚ್ಚು ಜನಪದ ಕಲಾವಿದರನ್ನು ಹಾಗು ಅವರ ಜನಪದ ಸಾಹಿತ್ಯವನ್ನು ಪತ್ರಿಕೆಗಳ ಮೂಲಕ ನಾಡಿಗೆ ಪರಿಚಯಿಸಿರುವುದುವಿಶೇಷ.
ಡಾ. ಬಾನಂದೂರು ಅವರು, ಹೈಸ್ಕೂಲಿನಲ್ಲಿದ್ದಾಗಲೆ ತಮ್ಮ ಜನಪದ ಹಾಡುಗಾರಿಕೆಗಾಗಿ ಬಹುಮಾನ ಪಡೆದು ‘ಬೆಳೆಯುವ ಸಿರಿ ಮೊಳಕೆಯಲಿ’ ಎಂಬಂತೆ ಗಮನ ಸೆಳೆದರು.
ಎರಡು ಬಾರಿ ಅಮೆರಿಕಾ, ಒಂದು ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ತಮ್ಮ ಜಾನಪದ ಗಾಯನದ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿ ತಂದ ಡಾ. ಕೆಂಪಯ್ಯ ಅವರು ದೇಶದ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ ಮಾತ್ರವಲ್ಲ ಅನೇಕ ಸಣ್ಣಾಟ, ದೊಡ್ಡಾಟ, ಗೊಂಬೆಯಾಟಗಳಿಗೆ ಸಂಗೀತ ಒದಗಿಸಿದ್ದಾರೆ. ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಶ್ರೀಮತಿ ಮಂಜುಳಾ ಗುರುರಾಜ್ ಹಾಗು ಕಸ್ತೂರಿ ಶಂಕರ್ ಜೊತೆಗೆ ಹಾಡಿದ್ದಾರೆ. ಈ ಧ್ವನಿಸುರಳಿಗಳಲ್ಲಿ ‘ಬಣ್ಣದ ಬಳೆಗಾರ’ ವಿಶೇಷವಾಗಿ ಜನಪ್ರಿಯವಾಗಿದೆ. ಕೆಂಪಯ್ಯನವರು ಜನಪ್ರಿಯಗೊಳಿಸಿದ ಮತ್ತೊಂದು ಜನಪದ ಗೀತೆಯೆಂದರೆ ‘ಬಿದಿರು ನಾನಾರಿಗಲ್ಲದವಳು’.
ಸಿನಿಮಾ ನಂಟು: ಡಾ. ಕೆಂಪಯ್ಯನವರು ಗುರುರಾಜ ಕಾಟೆ ನಿರ್ದೇಶನದ ‘ಬಂಗಾರದ ಗೂಳಿ’ ಚಲನಚಿತ್ರಕ್ಕೆ ಗುಣಸಿಂಗ ಅವರ ಜತೆ ಸಂಗೀತ ನಿರ್ದೇಶಿಸಿದ್ದಾರೆ. ಅಲ್ಲದೆ “ಜಿಪ್ಸಿಗಳು” ಎನ್ನುವ ರಶಿಯನ್ ನಾಟಕಕ್ಕೂ ಸಂಗೀತ ನೀಡಿದ ಹೆಗ್ಗಳಿಕೆ ಇವರದು.
ಅಕಾಡೆಮಿ ಅಧ್ಯಕ್ಷ ಸ್ಥಾನ: ಮೂರು ಬಾರಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾಗಿ ಜಾನಪದ ಕ್ಷೇತ್ರಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಗಳು: ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
72ರ ಹರೆಯದಲ್ಲೂ ಗಾಯನ, ಕಾವ್ಯ ಕತೆ ರಚನೆಯಲ್ಲಿ ಬಿಜಿಯಾಗಿರುವ ಹಾಡುವ ಹಕ್ಕಿ ತಮ್ಮ ಪ್ರೀತಿಯ ಹಲವು ನೀಳ್ಗವಿತೆ ರಚನೆಯಲ್ಲಿ ಸಂತೋಷ ಕಾಣುತ್ತಿದ್ದಾರೆ.
ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ಡಾ. ಬಾನಂದೂರು ಅವರು ನೂರ್ಕಾಲ ಸುಖವಾಗಿರಲಿ ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ ಆಶಿಸುತ್ತದೆ. ಖ್ಯಾತ ಜಾನಪದ ಗಾಯಕಿ ಶ್ರೀಮತಿ ಸವಿತಕ್ಕ ಅವರು ತಮ್ಮ ಪತಿ ಅವರ ಜತೆ ಇಂದು ಬೆಂಗಳೂರಿನಲ್ಲಿರುವ ಡಾ. ಬಾನಂದೂರು ಅವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.
#ಸಿ.ಮಂಜುನಾಥ್, ಸಂಪಾದಕರು: karnatakakahale.com
*****