ಹೆಜ್ಜೆ ಇಟ್ಟಾಗೊಮ್ಮೆ
ಅದೇ ಅಳುಕು
ಅದೇ ಭಯ
ಅದೇ ದುಗುಡ
ನನ್ನನ್ನು ಆವರಿಸುತ್ತಲೇ ಇರುತ್ತೇ
ರವಿಕೆಯ ಒಂದೊಂದು
ತೊಳುಗಳನ್ನು ಏರಿಸಿ
ಬಿಗಿ ಹಿಡಿತದ ಬಂಧನದಲ್ಲೂ
ನಿನ್ನನ್ನು ಮೈಗೆ ಆವರಿಸಿಕೊಂಡಾಗ
ಕೈದಿಯ ಕೊಳಗಳನ್ನು
ತೊಟ್ಟಂತೆ ಭಾಸವಾಗುತ್ತಿದೆ
ಲಂಗದ ಲಾಡಿ ಬಿಗಿದಾಗ
ನರನಾಡಿಗಳೆಲ್ಲವನ್ನು ಕಟ್ಟಿ
ಉಸಿರೇ ನೀ ಹೀಗೆ ಇರು ಎನ್ನುತ್ತಿದೆ
ಈ ಮೈಮನಸು
ತಾಳ್ಮೆಯ ನೆಪ ಹೇಳಿ
ಹೆಣ್ಣು ನೀ ಹೀಗೆ ಬದುಕಬೇಕು ಎಂದವರಿಗೆ
ನನ್ನದೊಂದು ಸವಿ ಮನವಿ
ನಿಮಗೆ ಇಲ್ಲದ ಈ ಕಟ್ಟು ಪಾಡು
ನಮಗೇಕೆ?
ನಿಮ್ಮನ್ನು ಮತ್ತೇ ಏನು ಕೇಳುವದಿಲ್ಲ
ಮೈ ಮಾಟ ವರ್ಣಿಸುವ
ನಿಮ್ಮ ಕಣ್ಣ ಸುಖಕ್ಕಾಗಿ
ನಮ್ಮದೇ ದೇಹ ನಿಮ್ಮದಾಗಬೇಕೆ?
ಕೆನಕದಿರು
ತಡೆಯದಿರು
ರೊಚ್ಚಿಗೆಳಿಸದಿರು
ಸ್ವಚ್ಛಂದವಾಗಿ ಹಾರಾಡಲು ಬಿಡು
ಸಂಪ್ರದಾಯ ಸಂಸ್ಕ್ರತಿಯ ನೆಪ ಹೇಳಿ
ಕಟ್ಟಿ ಹಾಕಿದರೆ
ಇಗೋ ನಮ್ಮದು ಹೀಗೆ
ಕಾಲಡಿ ಬಂದ ನಿರಿಗೆಗಳ ಹಾಗೆ
ನಿರಂತರವಾಗಿ ಹೀಗೆ
ಕೋಮಲ ಕಾಲುಗಳ ಸ್ಪರ್ಷದಿ
ಚಿಮ್ಮುತಲಿರುವೆವು
ಸದಾ ಎಚ್ಚರದ ಬದುಕ ಕಟ್ಟಲು
-ಡಾ.ಸುಜಾತಾ ಚಲವಾದಿ, ವಿಜಯಪುರ
*****