ಅನುದಿನ‌ ಕವನ-೮೯೮, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಅಪ್ಪ‌ ಅಂದರೆ ಅಪ್ಪ ಅಷ್ಟೆ

ಅಪ್ಪ ಅಂದರೆ ಅಪ್ಪ ಅಷ್ಟೆ

ಹೊಡೆದು ಹೊಡೆದೂ
ಮಗ್ಗಿ ಕಲಿಸಿದ
ಅಕ್ಷರದ ದಾರಿ ತೋರಲು
ಶಾಲೆಗೆ ಕಳಿಸಿದ
ತನ್ನೆಲ್ಲ ಕಷ್ಟಗಳ ನುಂಗಿ
ಸುಖವನ್ನಷ್ಟೇ ಉಣಿಸಿದ
ಆಲದ ಮರದಂತೆ ವಿಶಾಲವಾಗಿ ಹರಡಿ
ತನ್ನ ಕುಡಿಯೆಂದು ಬೀಗಿದ
ಆಗಸದ ಚುಕ್ಕೆಗಳನ್ನೆಣಿಸಲು ಕಲಿಸುತ್ತಲೇ
ನೆಲದ ನಡಿಗೆಯ ಬಗ್ಗೆಯೂ ಹೇಳಿದ
ಹೂವಿನ ಮೃದುತ್ವದ ಜೊತೆಗೇ
ಮುಳ್ಳುಗಳ ನೋವನ್ನೂ ತಿಳಿಸಿದ
ಬದುಕುವುದನ್ನು ಕಲಿಸುತ್ತಲೇ
ಬದುಕಿ ತೋರಿದ
ಎದೆಯುದ್ದ ಬೆಳೆದ ಮಗನನ್ನು
ಎದೆಯೊಳಗೇ ಬಚ್ಚಿಟ್ಟುಕೊಂಡಿದ್ದ
ಕತ್ತಲೊಳಗೆ ದೀಪ ಬೆಳಗಿ
ಬೆಳಕಿನ ಬೆಲೆಯ ಅರುಹಿದ
ಮಗ ಬೆಳೆದಂತೆಲ್ಲ
ತನ್ನದೇ ಬೆಳವಣಿಗೆಯೆಂದು ಬೀಗಿದ
ಬೆಟ್ಟ ಏರುವುದನ್ನು ಕಲಿಸಿದ,
ಜಾರದಿರುವುದು ಹೇಗೆಂದೂ ಎಚ್ಚರಿಸಿದ
ಯಾವುದಕ್ಕೂ ಇಲ್ಲವೆನ್ನದೆ,
ನೋವಿನಲ್ಲೂ ಸಂತಸಪಡುವುದನ್ನು
ಹೇಳದೇ ಕಲಿಸಿದ
ಇನ್ನೇನು ಹೇಳಲಿ ,
ಅಪ್ಪ ಅಂದರೆ ಅಪ್ಪ ಅಷ್ಟೆ,

ಅಪ್ಪ,
ನನಗೂ ಆಗಸಕ್ಕೂ ಮಧ್ಯೆ
ನೀನೊಂದು ಸೇತುವೆ,
ಬೀಳದಂತೆ ತಡೆಹಿಡಿವ
ಭದ್ರವಾದ ಬಾಹು,
ನಾನೆಷ್ಟು ನಡೆದರೂ
ನಿನ್ನ ಹೆಜ್ಜೆಗೆ ಸಮನಾದೀತೆ ?
ಹುಡುಕುತ್ತಿದ್ದೇನೆ ನಿನ್ನನ್ನು
ನೀನು ಬರೆದು ಉಳಿಸಿ ಹೋದ ಅಕ್ಷರಗಳಲ್ಲಿ,
ನೀನು ಮಾತನಾಡಿ ಹೋದ
ಸ್ಮೃತಿ ಪಟಲದಲ್ಲಿ,
ಉಸಿರಾಡಿ ಹೋದ ಗಾಳಿಯಲ್ಲಿ,
ನೀನು ಮಲಗಿದ ಜಾಗೆಯಲ್ಲಿ,
ಈಗಲೂ ಹುಡುಕುತ್ತಿದ್ದೇನೆ
ನಿನ್ನ ಪಿಸುಮಾತು
ಕೇಳಿಸಿದರೂ ಕೇಳಬಹುದೆಂದು,
ನಡೆದಾಡಿದ ದಾರಿಯಲ್ಲಿ
ಹೆಜ್ಜೆ ಗುರುತು ಕಾಣಬಹುದೆಂದು,

ನಿಜ,
ನೀನು ಬಿರುದು ಬಾವಲಿಗಳನ್ನು ಹೊತ್ತ
ಮಹಾನ್ ವ್ಯಕ್ತಿಯಲ್ಲ,
ವಿದ್ವಾಂಸನಲ್ಲ,
ಜನನಾಯಕನಲ್ಲ,
ಆದರೆ-
ನೀನು ಮಹಾನ್ ವ್ಯಕ್ತಿಗಳನ್ನು,
ವಿದ್ವಾಂಸರನ್ನು,
ಜನನಾಯಕರನ್ನು
ಅರಿತುಕೊಳ್ಳುವ ರೀತಿಯನ್ನು
ಕಲಿಸಿದ ನನ್ನ ಪಾಲಿನ ಅಕ್ಷರ,
ಅಕ್ಷರಗಳೊಳಗಿನ ಜ್ಞಾನ .
ಅದಕ್ಕೇ –
ಅಪ್ಪ ಅಂದರೆ ಅಪ್ಪ ಅಷ್ಟೆ !


-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
*****