ಅನುದಿನ ಕವನ-೯೦೦, ಶ್ರೇಷ್ಠ ಕವಿ:ಪದ್ಮಶ್ರೀ, ನಾಡೋಜ ಡಾ.ಸಿದ್ಧಲಿಂಗಯ್ಯ ಅವರು, ಕವನದ ಶೀರ್ಷಿಕೆ: ಸಾವಿರಾರು ನದಿಗಳು

ಎಂಥ ರೊಚ್ಚು, ಆವೇಶದ ಕವಿತೆ. ಪ್ರತಿಯೊಂದು ಶಬ್ದವೂ ಸಿಡಿಗುಂಡಿನಂತೆ. ಕವಿತೆಯಲ್ಲಿ ರೊಚ್ಚು, ಆವೇಶ ತುಂಬುವಲ್ಲಿ ಕವಿ ಡಾ.ಸಿದ್ಧಲಿಂಗಯ್ಯನವರಿಗೆ ಡಾ.ಸಿದ್ಧಲಿಂಗಯ್ಯ ಅವರೇ ಸಾಟಿ! ಭೌತಿಕವಾಗಿ ನಮ್ಮ ಜತೆ ಇರದಿದ್ದರೂ ಇವರ ಸಾಹಿತ್ಯ, ಸಮಾಜಮುಖಿ ಕಾರ್ಯಗಳ ಮೂಲಕ ಕೋಟಿ ಕೋಟಿ ಮನಸುಗಳಲ್ಲಿ ನೆಲೆಸಿದ್ದಾರೆ.    🙏🙏ಅನುದಿನ‌ ಕವನ 900ನೇ ದಿನದ ಸಂಭ್ರಮದಲ್ಲಿ  ಜನಕವಿಗಳ ಪ್ರಸಿದ್ಧ ಕವನ ‘ಸಾವಿರಾರು ನದಿಗಳು’ ಪ್ರಕಟಿಸುವ ಮೂಲಕ ಎರಡನೆಯ ಪುಣ್ಯ ಸ್ಮರಣೆಯ ಈ ಸಂದರ್ಭದಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ಗೌರವ ನಮನ ಸಲ್ಲಿಸುತ್ತಿದೆ. 🙏🙏
(ಸಂಪಾದಕರು)

ಸಾವಿರಾರು ನದಿಗಳು

ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು
ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿದಸಾಲು ಹುಲಿಸಿಂಹದ ದನಿಗಳು
ಧಿಕ್ಕಾರ ಧಿಕ್ಕಾರ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ
ಲಕ್ಶಾಂತರ ನಾಗರಗಳು ಹುತ್ತಬಿಟ್ಟು ಬಂದಂತೆ
ಊರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು
ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತ್ತಿಗೆಗಳ ಹಿಡಿದರು.
ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರಪುರಾಣ ಬಂದೂಕದ ಗುಡಾಣ
ತರೆಗೆಲೆ ಕಸಕಡ್ಡಿಯಾಗಿ
ತೇಲಿತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು


– ನಾಡೋಜ ಡಾ.ಸಿದ್ಧಲಿಂಗಯ್ಯ, ಪ್ರಸಿದ್ಧ ಕವಿಗಳು
*****