ನೀವು ನಡೆಯುತ್ತಿರುವ
ದಾರಿಯಲ್ಲಿ
ನಿಮಗೇ ಗೊತ್ತಿಲ್ಲದಂತೆ
ಒಂದು ಕವಿತೆ ಸಿಗಬಹುದು
ಹಾಗೆಯೇ ನಿಂತು ಓದಿಬಿಡಿ
ನಂತರ ನೀವು
ಏನನ್ನೋ ಯೋಚಿಸಬಹುದು,
ಹಾಗಾಗದಿದ್ದಲ್ಲಿ
ಸುಮ್ಮನೆ ನಡೆದುಬಿಡಿ
ಅದೇ ದಾರಿಯಲ್ಲಿ
ಮತ್ತೊಂದು ಕವಿತೆ
ಮಾತನಾಡಿಸುತ್ತದೆ
ಮಾತನಾಡಿಸಿರಿ,
ಈಗಲೂ ಯೋಚನೆಗೆ
ಏನೂ ಸಿಗದಿದ್ದಲ್ಲಿ
ಮತ್ತೆ ಮುಂದೆ ಸಾಗಿರಿ
ಎಷ್ಟೋ ಕವಿತೆಗಳ ದಾಟಿದ ನಂತರ
ಯಾವುದೋ ಕವಿತೆಯೊಂದು
ಮೌನ ತೊಟ್ಟು
ಸುಮ್ಮನೆ ಕುಳಿತಿರುತ್ತದೆ,
ಅದನ್ನು ನೀವೇ ಮಾತನಾಡಿಸಿ
ಹಿಂದೆ ಸಿಕ್ಕ ಕವಿತೆಗಳ ಬಗ್ಗೆ ಹಾಗೆಯೇ
ಕುತೂಹಲಕ್ಕಾದರೂ ಪ್ರಶ್ನಿಸಿರಿ
ನಿಮಗೀಗ ಹಳೆಯ ಕಥೆಗಳು
ಬಹಳಷ್ಟು ಸಿಕ್ಕಿಬಿಡುವವು
ನೀವೀಗ ಯೋಚಿಸಬಹುದು,
ನಡೆಯದಿದ್ದರೂ ಮತ್ತೆಷ್ಟೋ
ಕವಿತೆಗಳು ಸಿಗಬಹುದು,
ಕವಿಯಾಗಬಹುದು
ಇಲ್ಲವೆ, ಇದೊಂದು
ಕಥೆಯಾದರೂ ಆಗಬಹುದು
-ಭವ್ಯ ಕಬ್ಬಳಿ, ಬೆಂಗಳೂರು
*****